Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬನ್ನೇರುಘಟ್ಟದಲ್ಲಿ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಮೂರು ಮಂದಿ ಸಾವು

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಯಿಂದಾಗಿ ಮೂರು ಸಾವು ಸಂಭವಿಸಿದೆ.

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು, ಆನೆ ದಾಳಿಗೆ ಸಿಲುಕಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಪ್ರತಿ ಕುಟುಂಬದವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಈ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿ ಸುಮಾರು 125 ಆನೆಗಳಿವೆ ಆದರೆ, ಅವುಗಳ ಸಂಖ್ಯೆ ಕೆಲವೊಮ್ಮೆ 220ಕ್ಕೆ ಏರುತ್ತದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ತಮಿಳುನಾಡಿನೊಂದಿಗೆ ಗಡಿಯನ್ನು ಹೊಂದಿದೆ. ಕನಕಪುರ, ಕಾವೇರಿ ಮತ್ತು ರಾಮನಗರ ಅರಣ್ಯ ಶ್ರೇಣಿಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿರುವುದರಿಂದ ಈ ಭಾಗದಲ್ಲಿ ಆನೆಗಳ ಚಲನವಲನ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅರಣ್ಯ ವ್ಯಾಪ್ತಿಯಲ್ಲಿ ಜನರ ಓಡಾಟ ಹೆಚ್ಚಾದಂತೆ ಸಮಸ್ಯೆ ಉಲ್ಬಣಗೊಂಡಿದೆ. ನಾಗರಿಕ ಚಟುವಟಿಕೆಗಳು, ಅತಿಕ್ರಮಣ ಮತ್ತು ಜನರ ಉಪಸ್ಥಿತಿಯಲ್ಲಿ ಆನೆ ದಾಳಿ ಹೆಚ್ಚಳವಾಗಿದೆ. ರೈಲು ತಡೆಗೋಡೆಗಳನ್ನು ರಚಿಸಲು ಮತ್ತು ಹಳೆಯ ಸೋಲಾರ್‌ ಮತ್ತು ಮುಳ್ಳುತಂತಿಗಳನ್ನು ಬದಲಾಯಿಸಲು ಹಣದ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಇಲ್ಲಿ ಗ್ರೌಂಡ್‌ ಸಿಬ್ಬಂದಿ ಕೊರತೆಯೂ ಇರುವುದಾಗಿ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ಭದ್ರತೆ ಬೇಕು ಎಂಬುದಕ್ಕೆ ಇಲ್ಲಿ ಆಗುತ್ತಿರುವ ಘಟನೆಗಳೇ ನಿದರ್ಶನಗಳಾಗಿವೆ ಎಂದು ತಿಳಿಸಿದ್ದಾರೆ.

 

Tags:
error: Content is protected !!