Mysore
22
mist

Social Media

ಬುಧವಾರ, 10 ಡಿಸೆಂಬರ್ 2025
Light
Dark

ಡಿಕೆ ಶಿವಕುಮಾರ್ ವಿರುದ್ಧದ ತನಿಖೆ ಯಾಕೆ ಪೂರ್ಣಗೊಳಿಸಿಲ್ಲ: ಸಿಬಿಐಗೆ ಹೈಕೋರ್ಟ್‌ ಪ್ರಶ್ನೆ

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್‌ಐಆರ್‌ ದಾಖಲಿಸಿ ಸುಮಾರು 4 ವರ್ಷಗಳಾದರೂ ಅಂತಿಮ ವರದಿ ಸಲ್ಲಿಸದಿರುವ ಕುರಿತು ಶುಕ್ರವಾರ ಹೈಕೋರ್ಟ್‌(ಏ.೫) ಮೌಖಿಕವಾಗಿ ಪ್ರಶ್ನಿಸಿದೆ.

ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಅಂತಿಮ ಹಂತದಲ್ಲಿ ನ್ಯಾ. ಅಡಿಗ ಅವರು ಸಿಬಿಐ ಇನ್ನೂ ವಿಚಾರಣೆ ಆರಂಭಿಸಿಲ್ಲವೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಧ್ವನಿಗೂಡಿಸಿದ ನ್ಯಾ. ಸೋಮಶೇಖರ್‌ ಅವರು, ಸಿಬಿಐ ಯಾವಾಗ ಎಫ್‌ಐಆರ್‌ ದಾಖಲಿಸಿತು ಎಂದು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರಸನ್ನ ಕುಮಾರ್‌ ಅವರು 2020ರ ಅಕ್ಟೋಬರ್‌ 3ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್‌ ಅವರು ಆರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದರು. ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು ಎಂದು ಸಮಜಾಯಿಷಿ ನೀಡಿದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ವಿಚಾರಣೆ ಮುಂದೂಡಲಾಯಿತು.

Tags:
error: Content is protected !!