ಜಡ್ಜ್‌ ಮುಂದೆ ದರ್ಶನ್‌ ಹೇಳಿದ್ದೇನು? ದಾಸನ ವಿಚಾರಣೆ ಹೇಗಿತ್ತು ಗೊತ್ತಾ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತೊಮ್ಮೆ ಜೈಲು ಪಾಲಾಗಿದ್ದಾರೆ.  13 ವರ್ಷದ ಬಳಿಕ ಸಾರಥಿ ಮತ್ತೆ ಜೈಲುವಾಸಿಯಾಗಿದ್ದಾರೆ.

ದರ್ಶನ್‌ ಸೇರಿದಂತೆ ಸಹಚರರ ಪೊಲೀಸ್‌ ಕಸ್ಟಡಿ ಇಂದು(ಜೂ.22) ಮುಗಿದ ಹಿನ್ನಲೆ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ತನಿಖಾಧಿಕಾರಿ ಚಂದನ್‌ ಅವರು ಆರೋಪಿಗಳಾದ ದರ್ಶನ್‌, ವಿನಯ್‌, ದರ್ಶನ್‌ ಮತ್ತು ಪ್ರದೂಶ್‌ ಅವರನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್‌ ಮತ್ತವರ ತಂಡ ಹಾಗೂ ದರ್ಶನ್‌ ವಕೀಲರ ತಂಡ ಹಾಜರಿತ್ತು. ಈ ವೇಳೆ ವಾದ-ವಿವಾದ ನಡೆಯಿತು.

ಜಡ್ಜ್:‌ ನಿಮಗೆ ಕಸ್ಟಡಿಯಲ್ಲಿ ಏನಾದ್ರೂ ತೊಂದರೆ ಆಯ್ತಾ
ದರ್ಶನ್:‌ ಇಲ್ಲ ಸ್ವಾಮಿ ಯಾವುದೇ ತೊಂದರೆ ಆಗಿಲ್ಲ

ಜಡ್ಜ್:‌ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ರಾ. ನಿಮಗೆ ಏನಾದ್ರೂ ಮೆಡಿಕಲ್‌ ಪರೀಕ್ಷೆ ಅವಶ್ಯಕತೆ ಇದೆಯಾ?
ದರ್ಶನ್:‌ ಹೌದು ಸ್ವಾಮಿ, ನನಗೆ ಇಂದು ಬೆಳಿಗ್ಗೆ ಠಾಣೆಯಲ್ಲಿ ಮಾಡಿಸಿದ್ರು. ಬೇರೆ ಪರೀಕ್ಷೆ ಅವಶ್ಯಕತೆ ಇಲ್ಲ.

ಈ ವೇಳೆ ಸರ್ಕಾರ ಪರ ಎಸ್‌ಪಿಪಿ ಪ್ರಸನ್ನ ಕುಮಾರ್‌, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು.

ಆರೋಪಿಗಳು ರೇಣುಕಾಸ್ವಾಮಿಯನ್ನು ತೀರ ಅಮಾನುಷವಾಗಿ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಇವರಿಗೆ ನೆಲದ ಕಾನೂನಿನ ಮೇಲೆ ಗೌರವವಿಲ್ಲ. ಆರೋಪಿ ಎ1 ಪ್ರಜೋದನೆ ಮೇರೆಗೆ ದರ್ಶನ್‌ ಮತ್ತು ತಂಡ ಈ ಕೃತ್ಯ ಮಾಡಿದೆ. ಒಳಸಂಚು ರೂಪಿಸಿ ಅಪಹರಣ ಹಾಗೂ ಹತ್ಯೆ ಮಾಡಿ ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಸಾಕ್ಷ್ಯ ನಾಶಕ್ಕಾಗಿ ಹಣ ಬಳಕೆ ಮಾಡಿದ್ದಾರೆ. ಇದೆಲ್ಲವೂ ಸಹ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಗೆ ಅಭಿಮಾನಿ ಬಳಗವಿದ್ದು, ಬೆದರಿಕೆ ಬರ್ತಾ ಇದೆ. ಹೀಗಾಗಿ ದರ್ಶನ್‌ ಮತ್ತು ತಂಡವನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಎಂಬ ಎಸ್‌ಪಿಪಿ ಪ್ರಸನ್ನ ಕುಮಾರ್‌ ಮನವಿ ಮೇರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿತು.