Mysore
23
scattered clouds
Light
Dark

ಡ್ರಗ್ಸ್‌ ದಂಧೆ ವಿರುದ್ಧ ಟಾಸ್ಕ್‌ ಫೋರ್ಸ್‌ ರಚನೆ: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಡ್ರಗ್ಸ್‌ ದಂಧೆ ಬೇರುಗಳನ್ನು ಕತ್ತರಿಸಲು ತೀರ್ಮಾನಿಸಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ( ಸೆಪ್ಟೆಂಬರ್‌ 18 ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಾಸ್ಕ್‌ಫೋರ್ಸ್‌ನಲ್ಲಿ ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಸಚಿವರನ್ನೊಳಗೊಂಡ ತಂಡವಿದ್ದು ಅನೇಕ ಸಭೆಗಳನ್ನು ನಡೆಸಿ ಅವಶ್ಯವಿರುವ ಕಾರ್ಯತಂತ್ರ ರಚಿಸಲು ಸೂಚಿಸಲಾಗಿದೆ. ಡ್ರಗ್ಸ್‌ ದಂಧೆ ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಡ್ರಗ್ಸ್‌ ದಂಧೆ ಕಂಡು ಬಂದರೆ ಎಸ್‌ಪಿ, ಡಿವೈಎಸ್‌ಪಿ, ಎಸಿಪಿ ಹಾಗೂ ಠಾಣಾಧಿಕಾರಿಗಳನ್ನೇ ಹೊಣೆ ಮಾಡಲು ನಿರ್ಧರಿಸಿದ್ದು ಇವರ ವಿರುದ್ಧವೇ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಡ್ರಗ್ಸ್‌ ಪೆಡ್ಲರ್‌ಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಕಾನೂನು ತಿದ್ದುಪಡಿ ಮಾಡಲು ಕ್ರಮ ಜರುಗಿಸಲಾಗುವುದು

ರಾಜ್ಯದಲ್ಲಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿರುವ ಪೆಡ್ಲರ್‌ಗಳಿಗೆ ಜೀವಿತಾವಧಿವರೆಗೂ ಕಠಿಣ ಶಿಕ್ಷೆ ವಿಧಿಸಲು ಕ್ರಮ ಜರುಗಿಸಲಾಗುವುದು. ಈಗ ಇರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವುದಲ್ಲದೇ, ಅಗತ್ಯವಿದ್ದರೆ ಹೊಸ ಕಾನೂನು ರಚನೆ ಮಾಡಲಾಗುವುದು. ಡ್ರಗ್ ಹಾವಳಿ ನಿಯಂತ್ರಿಸಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಂಡು ಯುವ ಜನರ ಮೇಲೆ, ವಿದ್ಯಾರ್ಥಿಗಳು ಹಾಗೂ ಕುಟುಂಬಗಳ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮ ತಡೆಯಲು ತೀರ್ಮಾನಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ NCC ಮತ್ತು NGO ಗಳನ್ನು ಗಟ್ಟಿಯಾಗಿಸುವುದನ್ನು ಗುರಿಮಾಡಿಕೊಂಡಿದ್ದೇವೆ. ಅಲ್ಲದೇ ಪುನರ್ವಸತಿ ಕೇಂದ್ರಗಳನ್ನು ಸಮರ್ಪಕಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿದ್ದು, ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿರುವ ಪೆಡ್ಲರ್‌ ಗಳಿಗೆ ಹಾಗೂ ಡ್ರಗ್‌ ಸೇವಿಸಿ ಅಪರಾಧ ಕೃತ್ಯಗಳಲ್ಲಿ ಪಾಲುದಾರರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಡಿವಾಣ ಹಾಕಲು ಪೊಲೀಸರಿಗೆ ಫ್ರೀ ಹ್ಯಾಂಡ್‌ ನೀಡುವ ಜೊತೆಗೆ ಅವರನ್ನೇ ನೇರವಾಗಿ ಹೊಣೆ ಮಾಡಿ, ಅವರ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ. ಆದರೆ, ಕಾನೂನು ತಿದ್ದುಪಡಿಗೆ ವಿಷಯವಾಗಿ ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ‌ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಜಾಲಕ್ಕೆ ಕಡಿವಾಣ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿ ವಿದ್ಯಾರ್ಥಿ ಮತ್ತು ಯುವ ಜನರಿಗೆ ಡ್ರಗ್ಸ್‌ ವಿರುದ್ಧ ವೇಗವಾಗಿ ಜಾಗೃತಿ ಕಾರ್ಯಾಚರಣೆಯನ್ನು ಮಾಡಲು ಸ್ಪಷ್ಟ ಸೂಚನೆ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯಕ್ಕೆ ಡ್ರಗ್ಸ್‌ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಸೇರಿದಂತೆ ಇನ್ನಿತರ ರಾಜ್ಯಗಳಿಂದ  ತರಿಸಿ ಮಾರಾಟ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲು ನೂತನ ಕಾರ್ಯತಂತ್ರ ರಚಿಸಿದ್ದೇವೆ. ಹೀಗಿದ್ದರೂ ರಾಜಧಾನಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಡ್ರಗ್‌ ಜಾಲ ಬಲವಾಗಿದೆ ಎಂಬ ಮಾಹಿತಿ ದೊರೆತಿದೆ. ಇದನ್ನು ನಿಯಂತ್ರಿಸಲು ಸೂಕ್ತ ನಿರ್ಣಯ ಮಾಡಲಾಗಿದೆ ಎಂದರು.

Tags: