ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮರಣೋತ್ತರ ಪರಿಕ್ಷೆ ವರದಿ ಹೆಣ್ಣೂರು ಠಾಣೆ ಪೊಲೀಸರ ಕೈಸೇರಿದ್ದು ತನಿಖೆ ಚುರುಕುಗೊಳಿಸಿದ್ದಾರೆ.
ವಿನಯ್ ಅವರು ಆತಹತ್ಯೆ ಮಾಡಿಕೊಂಡಿರುವ ನಿಖರವಾದ ಸಮಯ, ಯಾವ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದು ಮೃತದೇಹದ ಸ್ಥಿತಿ ಹೇಗಿತ್ತು. ಎಂಬಿತ್ಯಾದಿ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಪೊಲೀಸರು ವಿಶ್ಲೇಷಣೆ ಮಾಡುತ್ತಿದ್ದಾರೆ. ವಿನಯ್ ಸೋಮಯ್ಯ ಅವರು ಆತಹತ್ಯೆಗೂ ಮುನ್ನ ಯಾವ ಸಮಯದಲ್ಲಿ ತಮ್ಮ ಮೊಬೈಲ್ ನಲ್ಲಿ ವಾಟ್ಸಪ್‍ಮೆಸೇಜ್ ಹಾಕಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅವರ ಮೊಬೈಲ್‍ನ್ನು ವಶಪಡಿಸಿಕೊಂಡಿರುವ ಪೊಲೀಸರು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದ್ದು ಅದರ ವರದಿಗಾಗಿ ಕಾಯುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ ಎಫ್‍ಎಸ್‍ಎಲ್ ವರದಿ ಬರಲಿದ್ದು, ಅದರಲ್ಲಿರುವ ಅಂಶಗಳನ್ನು ಪರಿಗಣಿಸಿ ಪೊಲೀಸರು ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.
ವಿನಯ್ ಸೋಮಯ್ಯ ಅವರು ನಾಗವಾರದ ತಮ್ಮ ಕಚೇರಿಯಲ್ಲಿ ಕಳೆದ ಐದು ದಿನಗಳ ಹಿಂದೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್‍ನೋಟ್ ಹಾಕಿದ್ದರು. ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.





