ದಾವಣಗೆರೆ: ಇಲ್ಲಿನ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಬಿಜೆಪಿ ಪಕ್ಷದ ಸಭೆಗಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರವೆಂದು ಗುರುತಿಸಿಕೊಂಡಿರುವ ಬಣದ ಸುಮಾರು 40ಕ್ಕೂ ಅಧಿಕ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ.
ಈ ಕುರಿತು ಇಂದು(ಡಿಸೆಂಬರ್.15) ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಹರತಾಳು ಹಾಲಪ್ಪ, ಸೋಮಶೇಖರ ರೆಡ್ಡಿ, ಎಸ್.ಎ.ರವೀಂದ್ರನಾಥ್ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 40ಕ್ಕೂ ಅಧಿಕ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ದಾವಣಗೆರೆ ಸಮಾವೇಶ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣಗಳ ಮಧ್ಯೆ ಇರುವ ಮುನಿಸು ಹೈಕಮಾಂಡ್‌ನ ಮಧ್ಯಪ್ರವೇಶದಿಂದ ತಣ್ಣಾಗಾಗಿದೆ ಎನ್ನುವ ಬೆನ್ನಲ್ಲೇ ಇಂದು
ದಾವಣಗೆರೆಯಲ್ಲಿ ಸೇರಿರುವ ಈ ಸಭೆ ಕುತೂಹಲ ಮೂಡಿಸಿದೆ. ವಿಜಯೇಂದ್ರ ಪರವಾಗಿ ಮಧ್ಯ ಕರ್ನಾಟಕದಲ್ಲಿ ಶಕ್ತಿ ಪ್ರದರ್ಶನದ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಗೆ ಹಾಜರಾಗಲು ಶನಿವಾರ(ಡಿ.14) ರಾತ್ರಿ ವೇಳೆಯೇ ಅನೇಕ ನಾಯಕರು ಆಗಮಿಸಿದ್ದರೆ, ಇನ್ನೂ ಕೆಲವು ನಾಯಕರು ಇಂದು ಬೆಳಿಗ್ಗೆ ಆಗಮಿಸಿದ್ದಾರೆ. ಬಳಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.