Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಬೇಬಿಬೆಟ್ಟ ಜಾತ್ರಾ ಮಹೋತ್ಸವ: 24 ಜೋಡಿಗಳಿಗೆ ಮಾಂಗಲ್ಯ ವಿತರಿಸಿದ ವಿಜಯಲಕ್ಷ್ಮೀ ದರ್ಶನ್‌

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸರಳ ಸಾಮೂಹಿಕ ವಿವಾಹದಲ್ಲಿ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಭಾಗವಹಿಸಿ 24 ನವ ಜೋಡಿಗಳಿಗೆ ಮಾಂಗಲ್ಯ ವಿತರಿಸಿ ಶುಭಕೋರಿದ್ದಾರೆ.

ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಪ್ರತಿ ವರ್ಷ ರಾಸುಗಳ ಜಾತ್ರೆ ವೇಳೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಅಂತೆಯೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು(ಮಾರ್ಚ್.‌2) ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ವಿವಾಹ ನಡೆಯಿತು. ಅದರಲ್ಲಿ 24 ಮಂದಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನವಜೋಡಿಗೆ ವಿಜಯಲಕ್ಷ್ಮೀ ದರ್ಶನ್‌ ಅವರು ಮಾಂಗಲ್ಯ ವಿತರಣೆ ಮಾಡಿದರು. ಅಲ್ಲದೇ ಈ ಎಲ್ಲಾ ಜೋಡಿಗಳಿಗೆ ನಟ ಧನ್ವೀರ್ ಅವರು ವಾಚ್ ವಿತರಣೆ ಮಾಡಿದರೆ, ಹಾಸ್ಯನಟ ಚಿಕ್ಕಣ್ಣ ಅವರು ಸೀರೆ, ಪಂಚೆ ಮತ್ತು ಶರ್ಟ್ ವಿತರಿಸಿದ್ದಾರೆ.

ಇನ್ನೂ ಶ್ರೀರಾಮಾಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.10 ಗಂಟೆಗೆ ಶುಭಲಗ್ನದಲ್ಲಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಂಗಲ್ಯಧಾರಣೆ ಆಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನತೆ ಅಕ್ಷತೆ ಹಾಕುವ ಮೂಲಕ ವಧು-ವರರಿಗೆ ಆಶೀರ್ವಾದಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅವರು ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಒಳ್ಳೆಯ ನಿರ್ಧಾರ. ಈ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳ ಜೀವನ ಸುಖ, ನೆಮ್ಮದಿ ದೊರಕಲಿ ಹಾಗೂ ರೈತರು ಮತ್ತು ರೈತರ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

Tags:
error: Content is protected !!