ಬೆಂಗಳೂರು: ಮುಡಾ ಸೈಟ್ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣಗಳಿಂದ ಸದ್ಯ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್, ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ಸಜ್ಜಾಗಿವೆ. ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಜಂಟಿ ಹೋರಾಟದ ಬಗ್ಗೆ ನಿರ್ಧಾರ ಮಾಡಿವೆ.
ಸಿಎಂ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ಸೈಟ್ ಪ್ರಕರಣದ ಬಗ್ಗೆ ವಿಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಇದರ ಪ್ರಸ್ತಾಪಕ್ಕೆ ಭರ್ಜರಿ ಯೋಜನೆ ರೂಪಿಸಿವೆ.
ಈ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಂದು ಸಭೆ ನಡೆಸಿ ಜಂಟಿ ಹೋರಾಟದ ಬಗ್ಗೆ ಸುದೀರ್ಘ ಸಮಯ ಚರ್ಚೆ ನಡೆಸಿದ್ದಾರೆ.
ಪ್ರಧಾನವಾಗಿ ಅಧಿವೇಶನದಲ್ಲಿ ಮುಡಾ ಸೈಟ್ ಪ್ರಕರಣ, ವಾಲ್ಮೀಕಿ ನಿಗಮದ ಹಗರಣವನ್ನು ತಾರ್ತಿಕ ಅಂತ್ಯದವರೆಗೂ ಮುಂದುವರಿಸಲು ನಿರ್ಧಾರ ಮಾಡಲಾಗಿದೆ. ಉಳಿದಂತೆ ಬೆಲೆ ಏರಿಕೆ, ಡೆಂಗ್ಯೂ, ಕಾನೂನು ಸುವ್ಯವಸ್ಥೆ ವಿಷಯಗಳನ್ನು ಆಯಾಯ ಸನ್ನಿವೇಶಕ್ಕೆ ತಕ್ಕಂತೆ ಪ್ರಸ್ತಾಪ ಮಾಡಲಿವೆ.