ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ತನಿಖೆ ನಡೆಸಿದ ಇ.ಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಮಾಜಿ ಸಚಿವ ನಾಗೇಂದ್ರ ಸೇರಿದಂತೆ 5 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ನಾಗೇಂದ್ರ ಅಣತಿಯಂತೆ 187 ಕೋಟಿ ರೂ ಹಗರಣ ನಡೆದಿದೆ ಎಂದು ಇ.ಡಿ ಉಲ್ಲೇಖಿಸಿದೆ.
ಮಾಜಿ ಸಚಿವ ನಾಗೇಂದ್ರಗೆ ಹೈದರಾಬಾದ್‌ನಲ್ಲಿದ್ದ ಮಧ್ಯವರ್ತಿ ಸತ್ಯ ನಾರಾಯಣ ಎಂಬುವವನ ಜೊತೆ ನಿಕಟ ಸಂಪರ್ಕವಿತ್ತು. ನಾಗೇಂದ್ರ ಒಪ್ಪಿಗೆಯಂತೆಯೇ ಸಂಪೂರ್ಣ ಹಣದ ವ್ಯವಹಾರ ನಡೆದಿದೆ. 21 ಕೋಟಿ ರೂ ಹಣವನ್ನು ಈ ಬಾರಿಯ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.





