ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನೆಲೆ ಭೀಮಾ ಹೆಜ್ಜೆ ಶತಮಾನದ ಸಂಭ್ರಮ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ.
ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ‘ಬೆಂಗಳೂರಿನಿಂದ ನಿಪ್ಪಾಣಿ’ವರೆಗೆ ಏಪ್ರಿಲ್ 11 ರಿಂದ 14ರವರೆಗೆ ಹಮ್ಮಿಕೊಂಡಿರುವ ‘ಭೀಮ ಹೆಜ್ಜೆ 100 ರ ಸಂಭ್ರಮ’ ಜನ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯನ್ನು ಇಂದು(ಏಪ್ರಿಲ್.11)ವಿಧಾನಸೌಧದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಸರಿಯಾಗಿ 100 ವರ್ಷಗಳ ಹಿಂದೆ 1925ರ ಏಪ್ರಿಲ್ 10, 11 ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರು. ಬಹಿಷ್ಕೃತ ಹಿತಕಾರಿಣಿ ಸಭಾದ ಎರಡು ದಿನ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಅಗತ್ಯದ ಬಗ್ಗೆ ಮಾತನಾಡಿದ್ದರು. ಆ ಐತಿಹಾಸಿಕ ಭೀಮಹೆಜ್ಜೆಗೆ ಶತಮಾನದ ಸಂಭ್ರಮ. ಈ ಭೀಮ ಹೆಜ್ಜೆ ಸಂಭ್ರಮ ಸತತ ಐದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿದ್ದು 15ನೇ ತಾರೀಕಿಗೆ ನಿಪ್ಪಾಣಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಏಪ್ರಿಲ್ 11 ರಿಂದ 15 ವರೆಗೆ ಬೆಂಗಳೂರಿನಿಂದ ನಿಪ್ಪಾಣಿಯವರೆಗೆ ಬೈಕ್ ಜಾಥಾವನ್ನು ಈ ಶತಮಾನ ಸಮಾರಂಭದ ನಿಮಿತ್ತ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.
ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದರೂ ಭೀಮಹೆಜ್ಜೆ ಶತಮಾನದ ಸಂಭ್ರಮ ಮಾಡದೇ ಅಗೌರವ ತೋರಿದೆ. ಮೊನ್ನೆ ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಅಪಮಾನ ತೋರಿದೆ. ಇದು ಕಾಂಗ್ರೆಸ್ ಈಗಲೂ ಪಾಲಿಸುತ್ತಿರುವ ಪದ್ದತಿಯಾಗಿದೆ ಎಂದರು.





