ಚಿಕ್ಕಮಗಳೂರು: ಒಂದೇ ವಾರದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ಜನರು ತೀವ್ರ ಆತಂಕ್ಕೀಡಾಗಿದ್ದಾರೆ.
ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಮೊಟ್ಟೆ ಇಡುವ ಉಣ್ಣೆ ಜನವರಿ ವೇಳೆಗೆ ಮರಿಯಾಗಿ ಹರಡುತ್ತವೆ. ಅವು ಬೇಸಿಗೆ ತಿಂಗಳಾದ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಮತ್ತಷ್ಟು ವ್ಯಾಪಕವಾಗಿ ಹರಡಲಿದೆ.
ಆದರೆ ಮಳೆಗಾಲದಲ್ಲಿ ಈ ಉಣ್ಣೆ ಇರುವುದಿಲ್ಲ. 2024ರಲ್ಲಿ ವ್ಯಾಪಕ ಮಳೆ ಸುರಿದಿದ್ದರೂ ಸಹ, ಈ ವರ್ಷದ ಆರಂಭದಲ್ಲಿ ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಪತ್ತೆಯಾಗಿದೆ. ಇದರಿಂದ ಕಾಡಂಚಿನ ಕುಗ್ರಾಮಗಳಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮೇಲ್ಪಾಲ್‌ನಲ್ಲಿ ಓರ್ವ ವ್ಯಕ್ತಿಗೆ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕಡಬಗೆರೆಯಲ್ಲಿ ಓರ್ವ ಯುವಕನಿಗೆ ಕೆಎಫ್‌ಡಿ ಕಾಣಿಸಿಕೊಂಡಿದೆ. ಇಬ್ಬರು ಸೋಂಕಿತರ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸೂಚನೆ ನೀಡಿರುವ ಆರೋಗ್ಯ ಇಲಾಖೆಯು, ಇದು ಮಾರಣಾಂತಿಕ ವೈರಸ್ ಅಲ್ಲದಿದ್ದರೂ, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಇಲ್ಲದಿದ್ದರೆ ತೀವ್ರತರವಾದ ಅನಾರೋಗ್ಯ ಎದುರಿಸುವ ಸಂದರ್ಭ ಬರಬಹುದು. ಅದರಲ್ಲೂ ಪ್ರಮುಖವಾಗಿ ಶುಗರ್, ಬಿಪಿ, ಹೃದಯಸಂಬಂಧಿ ಕಾಯಿಲೆಯವರು, ಮದ್ಯ ವ್ಯಸನಿಗಳು ಸೇರಿದಂತೆ ಗಂಭೀರ ಕಾಯಿಲೆ ಇರುವವರು ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದೆ.