ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಫೆ.15 ರೊಳಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ.
ಸಾರಿಗೇತರ ಆದಾಯ ಹೆಚ್ಚಿಸಲು ಹಲವು ವರ್ಷಗಳಿಂದ ನಿಗಮದ ಬಸ್ಸುಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ಸಚಿವರ ಸೂಚನೆಯಂತೆ ತಂಬಾಕು ಉತ್ಪನ್ನಗಳ ಜಾಹೀರಾತನ್ನು ತೆರವುಗೊಳಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಾಷ ತಿಳಿಸಿದ್ದಾರೆ.
ನಿಗಮದ ಬಸ್ಸುಗಳ ಮೇಲೆ ಅಡ್ವರ್ಟೈಸ್‌ಮೆಂಟ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಕೋಡ್ ನಿಯಮಾವಳಿಗಳ ಅನ್ವಯ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶವಿದೆ. ನಿಗಮದ ವಾಹನಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತುಗಳ ಮೂಲಕ ನಿಗಮಕ್ಕೆ ಸಾರಿಗೇತರ ಆದಾಯ ಬರುತ್ತದೆ. ಬಸ್ಸುಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಲಿಖಿತ ಮನವಿ ಪಡೆದು ಕರಾರಿನ ನಿಯಮಾವಳಿಯಂತೆ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಕೆಲವು ವ್ಯಕ್ತಿಗಳು ಬಸ್ಸುಗಳ ಮೇಲಿರುವ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಅಂತಹ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಿಗಮದ ಎಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಽಕಾರಿಗಳಿಗೆ ನಿರ್ದೆಶನ ನೀಡಿದ್ದಾರೆ.
ಈ ಸಂಬಂಧ ಬಸ್ ನಿಲ್ದಾಣದ ಸಿಬ್ಬಂದಿಗಳು, ಚಾಲಕರು ಹಾಗೂ ಇತರೆ ಸಿಬ್ಬಂದಿಗಳಿಗೂ ಸೂಕ್ತ ತಿಳಿವಳಿಕೆ ನೀಡಲು ಅವರು ಸೂಚಿಸಿದ್ದಾರೆ.




