ಬೆಂಗಳೂರು: ಮತಗಳ್ಳತನ ಪ್ರಕರಣದಲ್ಲಿ ಚುನಾವಣಾ ಆಯೋಗ ನಾವು ಕೇಳಿದ ಎಲ್ಲಾ ಮಾಹಿತಿಗಳನ್ನು ಮೊದಲು ನೀಡಲಿ ನಂತರ ಆಯೋಗ ಕೇಳುವ ಪ್ರಮಾಣ ಪತ್ರವನ್ನು ಸಲ್ಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಮತಗಳ್ಳತನದ ವಿರುದ್ಧ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 300 ಮಂದಿ ಸಂಸದರು ದೆಹಲಿಗೆ ಹೋಗಿ ಸಮಯ ಕೇಳಿದ್ದಾರೆ, ಆಯೋಗ ಸ್ಪಂದಿಸುತ್ತಿಲ್ಲ. ನಾವು ಹಗರಣವನ್ನು ಹೊರ ತಂದ ಬಳಿಕ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಆಯೋಗ ಮುಂದಾಗಿದೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ
ಮತಗಳ್ಳತನದ ಮಾಹಿತಿಯನ್ನು ಪೂರ್ಣವಾಗಿ ನಾವು ಬಹಿರಂಗ ಪಡಿಸಿದರೆ ಅಲ್ಲೋಲ್ಲ ಕಲ್ಲೋಲವಾಗಲಿದೆ. ಬಿಜೆಪಿ ಅ„ಕಾರದಲ್ಲಿದ್ದರೆ ಮತಗಳ್ಳತನವನ್ನು ಮುಚ್ಚಿ ಹಾಕುತ್ತಾರೆ. ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟು ಚುನಾವಣೆ ಬರಲಿ ಎಂದು ಸವಾಲು ಹಾಕಿದರು.
ಒಂದು ಕ್ಷೇತ್ರದಲ್ಲಿ 2.40 ಲಕ್ಷ ಮತಗಳಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಅಲ್ಪಸಂಖ್ಯಾತರು, ದಲಿತರ ಮತಗಳನ್ನು ಪಕ್ಕದ ಕ್ಷೇತ್ರಕ್ಕೆ ಸ್ಥಳಾಂತರಿಸಿ ಅನ್ಯಾಯ ಮಾಡಲಾಗಿದೆ. ಚಿಲುಮೆ ಸಂಸ್ಥೆಯ ಹಗರಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾಧಿಕಾರಿಗಳೇ ದೂರು ದಾಖಲಿಸಿದ್ದರು. ತನಿಖೆಯಾಗಿ ಕೆಲವರನ್ನು ಅಮಾನತುಗೊಳಿಸಲಾಗಿತ್ತು, ಕೆಲ ಸಮಯದ ನಂತರ ಕೆಲವರು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ವಿವರಿಸಿದರು.





