Mysore
28
broken clouds

Social Media

ಬುಧವಾರ, 28 ಜನವರಿ 2026
Light
Dark

ಆಪರೇಷನ್ ಹಸ್ತ ಮಾಡುವ ಪ್ರಶ್ನೆಯೇ ಇಲ್ಲ| ಸಿದ್ಧಾಂತ-ನಾಯಕತ್ವ ಒಪ್ಪಿ ಬರುವವರಿಗೆ ಪಕ್ಷಕ್ಕೆ ಸ್ವಾಗತ: ಸಿಎಂ

ಬೆಂಗಳೂರು : ‘ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಆಪರೇಷನ್ ಹಸ್ತ ಕೈಗೊಳ್ಳುತ್ತಿದೆ ಎಂಬ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಹಸ್ತ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ’ ಎಂದರು.

ಪ್ರಧಾನಿಯವರ ಭಾಷಣ ಸುಳ್ಳಿನ ಕಂತೆ : ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಮುಖ್ಯಮಂತ್ರಿಗಳಾಗಿ ಉಳಿಯಲಿದ್ದಾರೆ ಎಂಬ ಪ್ರಧಾನಿಯವರ ರಾಜಕೀಯ ಭಾಷಣದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದರು.

ಬಿಜೆಪಿಯ ದಿವಾಳಿತನ : ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದೆ. ರಾಜ್ಯದಲ್ಲಿ ಇದುವರೆಗೆ ವಿರೋಧಪಕ್ಷದ ನಾಯಕರನ್ನು ಆಯ್ಕೆಮಾಡಿಲ್ಲ. ಇದು ಬಿಜೆಪಿಯ ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದರು.

ಬರಪರಿಹಾರ ನೀಡಿಲ್ಲ : ಸಿಎಂ ಮತ್ತು ಡಿಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಮಂತ್ರಿಗಳ ಭಾಷಣದಲ್ಲಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ”40 ಪರ್ಸೆಂಟ್ ಕಮೀಷನ್ ಸರಕಾರ ಎಂಬ ಆರೋಪ ಬಿಜೆಪಿ ಸರ್ಕಾರದದ ಮೇಲಿತ್ತು. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತಿದೆ. ದೇಶದ ಪ್ರಧಾನಿಯಾದವರು ಈ ವಿಷಯದ ಬಗ್ಗೆಯೂ ಮಾತನಾಡಬೇಕಲ್ಲವೇ? ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲ ತನಿಖಾ ಸಂಸ್ಥೆಗಳಿವೆ , ಪುರಾವೆಗಳು, ದಾಖಲೆಗಳಿಲ್ಲದೇ ಆರೋಪ ಮಾಡಬಾರದು. ಇಂದು ಇಡೀ ದೇಶವೇ ದಿವಾಳಿಯಾಗಿದೆ.

ರಾಜ್ಯದ ವಿರುದ್ಧ ಕೇಂದ್ರ ಮಲತಾಯಿ ಧೋರಣೆಯನ್ನು ತಳೆದಿದೆ. ಬರಗಾಲದ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಆದರೆ ನಮ್ಮ ಸರ್ಕಾರ ಅವುಗಳನ್ನು ಸಾಧಿಸಿ ತೋರಿಸಿದೆ. ಇಂತಹ ಹೇಳಿಕೆಗಳನ್ನು ದೇಶದ ಪ್ರಧಾನ ಮಂತ್ರಿಗಳಿಂದ ಅಪೇಕ್ಷಿಸಿರಲಿಲ್ಲ. ತಮ್ಮ ರಾಜಕೀಯ ಭಾಷಣದಲ್ಲಿ ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!