ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿಯೇ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಸಚಿವ ಕೆ.ಎನ್.ರಾಜಣ್ಣ ಅವರು ಸದನದಲ್ಲಿ ಮಾತನಾಡುವ ವೇಳೆ 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಚಿವ ಕೆ.ಎನ್.ರಾಜಣ್ಣ ಸಾಮಾನ್ಯ ವ್ಯಕ್ತಿಯಲ್ಲ. ಅವರು ಸರ್ಕಾರದ ಮಂತ್ರಿಯಾಗಿದ್ದಾರೆ. ಅವರೇ ಸದನದಲ್ಲಿ ಈ ಬಗ್ಗೆ ಆರೋಪ ಮಾಡಿದ್ದಾರೆ. ಈ ಸರ್ಕಾರದಲ್ಲಿ ದಲಿತ ಮಂತ್ರಿಗಳಿಗೆ ಕಿಂಚಿತ್ತೂ ರಕ್ಷಣೆ ಇಲ್ಲ ಎಂದು ಕಿಡಿಕಾರಿದರು.
ಸಚಿವ ರಾಜಣ್ಣ ಅವರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಯಾವುದೇ ಉತ್ತರ ನೀಡಿಲ್ಲ. ಇದು ಗಂಭೀರ ಪ್ರಕರಣ. ಎಲ್ಲಾ ಶಾಸಕರ, ಸದನದ ಹಾಗೂ ರಾಜ್ಯದ ಗೌರವದ ಪ್ರಶ್ನೆ. ಈ ಕುರಿತು ಸಿಬಿಐ ಹಾಗೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.





