Mysore
24
scattered clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಕರ್ನಾಟಕದ ಮಹಿಳಾ ಚಳವಳಿ : ಮಹಿಳೆಯರ ಅಸ್ಮಿತೆಯಾಗಿ ರೂಪಾಂತರವಾದ ಹೋರಾಟ

  • ಎನ್.ಗಾಯತ್ರಿ

ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮಾ ನನ್ನ ತಂಗಿ ಅನಸೂಯ.

1979ರ ಆಗಸ್ಟ್ 6ರಂದು ಹುಣಿಸೇಕೋಟೆಯ ಶೇಷಗಿರಿಯಪ್ಪನ ಮಗಳು ಅನಸೂಯಮ್ಮನ ಮೇಲೆ ನಡೆದ ಗುಂಪು ಅತ್ಯಾಚಾರ ಮತ್ತು ತದನಂತರ ಅವಳ ತಂದೆ ಶೇಷಗಿರಿಯಪ್ಪನ ಕೊಲೆಯ ಘಟನೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಮೆರವಣಿಗೆ ಕರ್ನಾಟಕದ ಮಹಿಳಾ ಚಳವಳಿಯಲ್ಲಿ ಚಾರಿತ್ರಿಕವಾದದ್ದು. ದಲಿತ ಸಂಘರ್ಷ ಸಮಿತಿಯ ಇತರ ಸಂಘಟನೆಗಳೊಂದಿಗೆ ಸಂಘಟಿಸಿದ್ದ, ಮಾಲೂರಿನ ಹುಣಿಸೇಕೋಟೆಯಿಂದ ಬೆಂಗಳೂರಿನ ವಿಧಾನಸೌಧದವರೆಗಿನ 90 ಕಿಲೋಮೀಟರುಗಳಷ್ಟು ದೂರದ ಪಾದಾಂತ್ರೆಯು ಬೆಂಗಳೂರನ್ನು ಪ್ರವೇಶಿಸಿದಾಗ ಸಿಐಟಿಯು ಕಾರ್ಯಕರ್ತರು ಅವರನ್ನು ಎದುರುಗೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಇನ್ನೂ ನನ್ನ ನೆನಪಿನ ಅಂಗಳದಲ್ಲಿದೆ. ಆ ಗುಂಪಿನಲ್ಲಿ ನಾನೂ ಒಬ್ಬಳಾಗಿದ್ದೆ.

ಹೀಗೆ ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕ್ರಿಯಾಶೀಲವಾದ ಮಹಿಳಾ ಚಳವಳಿ ತನ್ನ ಬೆನ್ನಿಗೆ ಒಂದು ದೀರ್ಘವಾದ ಮಹಿಳಾ ಪರಂಪರೆಯನ್ನು ಕಟ್ಟಿಕೊಂಡಿತ್ತು. ಮುಖ್ಯವಾಗಿ ವಿಶ್ವ ಸಂಸ್ಥೆ ಕರೆಕೊಟ್ಟ ಅಂತರರಾಷ್ಟ್ರೀಯ ಮಹಿಳಾ ವರ್ಷ ಮತ್ತು ಮಹಿಳಾ ದಶಕದ ಮೂಲ ಪ್ರೇರಣೆಯನ್ನು ತನ್ನೊಡಲಲ್ಲಿ ಉಸಿರಾಗಿಸಿಕೊಂಡಿತ್ತು. ಅಲ್ಲದೆ, ಕೇಂದ್ರ ಸರ್ಕಾರ ಹೊರ ತಂದ ಸವಾನತೆಯೆಡೆಗೆ ವರದಿಯು ಅದರ ಕೈದೀವಿಗೆಯಾಗಿತ್ತು.

ಅಂತರರಾಷ್ಟ್ರೀಯ ಮಹಿಳಾ ವರ್ಷದಿಂದ ಆರಂಭವಾಗಿ ಮುಂದುವರಿದ ಮಹಿಳಾ ದಶಕದ ಚಟುವಟಿಕೆಗಳು ಕರ್ನಾಟಕದಲ್ಲಿ ಹಲವಾರು ಮಹಿಳಾ ಸಂಘಟನೆಗಳನ್ನು ಹುಟ್ಟುಹಾಕಿದವು. ಮೈಸೂರಿನ ಸಮತಾ, ಬೆಂಗಳೂರಿನ ವಿಮೋಚನಾ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ, ಮಾನಸ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯಾದ ಕರ್ನಾಟಕ ಘಟಕ, ಮಹಿಳಾ ಸಾಂಸ್ಕೃತಿಕ ಸಂಘಟನೆ, ಮಹಿಳಾ ಮುನ್ನಡೆ ಹೀಗೆ ಇನ್ನು ಹಲವಾರು… ಈ ಸಂಘಟನೆಗಳಲ್ಲಿ ಕೆಲವರು ಸಮತಾ ವಾರ್ತಾ ಪತ್ರ, ವಿಮೋಚನಾ ವಾರ್ತಾ ಪತ್ರ, ಅಚಲ, ವಾನಸ, ಜಾಗೃತಿ ಮತ್ತು ಸಂವೇದಿ ಮುಂತಾದ ಪತ್ರಿಕೆಗಳನ್ನು ಪ್ರಕಟಿಸಿ, ಸ್ಥಾಪಿತ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕೆಂಬ ತಾತ್ವಿಕತೆಯ ನೆಲೆಗಟ್ಟನ್ನು ಹೊಂದಿದ್ದು ಮಹಿಳಾ ಚಳವಳಿಯ ಭಾಗವಾಗಿ ಕಾರ್ಯನಿರ್ವಹಿಸಿದವು. ಸೋದರಿತ್ವದ ನೆಲೆಯಲ್ಲಿ ಸಂಘಟಿತಗೊಂಡ ಈ ಸಂದರ್ಭದ ಮಹಿಳಾ ಚಳವಳಿಗೆ ಹೆಣ್ಣಿನ ಅಸ್ಮಿತೆಯನ್ನು ಕಂಡುಕೊಳ್ಳುವುದು ಅಂದಿನ ಅಗತ್ಯವಾಗಿತ್ತು.

ಮಹಿಳಾ ಚಳವಳಿಯ ಕಾರ್ಯಕರ್ತರು ಮಹಿಳಾ ಸಮಸ್ಯೆಗಳನ್ನು ರಾಜಕೀಯ ಪ್ರಶ್ನೆಗಳಾಗಿ ಕಂಡರು. ವೈಯಕ್ತಿಕವೂ ರಾಜಕೀಯವೇ ಎಂದು ಹೇಳುತ್ತಾ, ಕ್ರೌರ್ಯವನ್ನು ವ್ಯಕ್ತಿಯ ವರ್ತನೆಯಾಗಿ ಮಾತ್ರ ನೋಡದೆ ಅಧಿಕಾರದ ಪರಿಭಾಷೆಯಲ್ಲಿ ವಿವರಿಸಿದರು. ಅಧಿಕಾರ ಹೇರುವಿಕೆಯಿಂದ ಉದ್ಭವಿಸುವ ವರದಕ್ಷಿಣೆ ಸಾವುಗಳು, ಅತ್ಯಾಚಾರ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯಗಳು, ದುಡಿಯುವ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳಗಳು – ಇವೆಲ್ಲವೂ ಕಾನೂನಿನ ಶಿಕ್ಷೆಗೆ ಒಳಪಡಬೇಕಾದಂತಹವು ಎಂದು ಹೇಳುತ್ತಲೇ, ಅವುಗಳ ನಿವಾರಣೋಪಾಯಕ್ಕೆ ಅಗತ್ಯವಾದ ಕಾನೂನನ್ನು, ಕಾನೂನಿನ ಸುಧಾರಣೆಗಳನ್ನು ಜಾರಿಗೊಳಿಸುವ ಬಗ್ಗೆ ಒತ್ತಿ ಹೇಳಿದವು ಮತ್ತು ಹೋರಾಟ ಮಾಡಿದವು.

ಜಾತಿ, ಧರ್ಮ, ಭಾಷೆ, ಜನಾಂಗ ಮತ್ತು ಸಮುದಾಯಗಳನ್ನು ಆಧರಿಸಿದ ಅಪಾರ ಭಿನ್ನತೆಗಳಿರುವ ಹಾಗೂ ಹಲವಾರು ವಿಧದ ಸಾವಾಜಿಕ ದಮನಗಳಿರುವ ರತದಂತಹ ದೇಶದಲ್ಲಿ ಐಡೆಂಟಿಟಿಯ ರಾಜಕೀಯ ವ್ಯಾಪಕವಾಗಿದೆ. 1990 ನಂತರದ ದಿನಗಳಲ್ಲಿ ಹೀಗೆ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಕೇವಲ ಒಂದು ಸಾಂಸ್ಕೃತಿಕ ಪ್ರಕ್ರಿಯೆಯಾಗಿ ಮಾತ್ರ ಉಳಿಯಲಿಲ್ಲ, ಅದೊಂದು ರಾಜಕೀಯ ಪರಿಕಲ್ಪನೆಯೂ ಆಯಿತು. ಅಸ್ಮಿತೆಯ ರಾಜಕೀಯದಲ್ಲಿ ವ್ಯಕ್ತಿಗಳು ತಮ್ಮನ್ನು ತಾವು ಹುಟ್ಟಿದ ಜಾತಿ, ಧರ್ಮ, ಸಮುದಾಯ ಮತ್ತು ಆಕೆಯ ಲಿಂಗಗಳ ಮೂಲಕ ಗುರುತಿಸಿಕೊಳ್ಳುತ್ತಲೇ ತಮ್ಮ ಹಕ್ಕುಗಳ ಸಮರ್ಥನೆಗಾಗಿ ಸಂಘಟಿತರಾದರು. ಅಂಚಿಗೆ ತಳ್ಳಲ್ಪಟ್ಟ ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಗುಂಪುಗಳು ಮತ್ತು ಲೈಂಗಿಕ ಕಾರ್ಯಕರ್ತರು ಮತ್ತು ಇಲ್ಲಿಯವರೆಗೂ ಅಗೋಚರವಾಗಿದ್ದ ಲೈಂಗಿಕ ಅಲ್ಪಸಂಖ್ಯಾತರು (ಲಿಂಗಾಂತರಿಗಳು) ಈ ಅವಧಿಯಲ್ಲಿ ತಮ್ಮ ಅಸ್ಮಿತೆಯನ್ನು ಸ್ಥಾಪಿಸುತ್ತಾ ತಮ್ಮ ಹಕ್ಕುಗಳಿಗಾಗಿ ತಮ್ಮ ಸಮುದಾಯಗಳ ಸಂಘಟನೆುಂನ್ನು ಬಲಪಡಿಸಿಕೊಳ್ಳುತ್ತಾ ಹೊರಟರು. 1995ರಲ್ಲಿ ‘ನ್ಯಾಷನಲ್ ಫೆಡರೇಷನ್ ಫಾರ್ ದಲಿತ್ ವಿಮೆನ್’ ಸ್ಥಾಪನೆಯಾದ ನಂತರ ದಲಿತ ಪ್ರಶ್ನೆಗಳು ಹೆಚ್ಚು ಮುನ್ನೆಲೆಗೆ ಬಂದವು. ಈ ಪ್ರಯತ್ನದಲ್ಲಿ ಕರ್ನಾಟಕದ ರೂತ್ ಮನೋರವಾ ಅವರ ಪ್ರಯತ್ನ ಹಿರಿದಾದದ್ದು.
ಆರಂಭದಲ್ಲಿ ವೈಯಕ್ತಿಕವಾದುದೆಲ್ಲ ರಾಜಕೀಯವೇ ಎಂದು ಹೊರಟ ಮಹಿಳಾ ಚಳವಳಿ ಈಗ ರಾಜಕೀಯವೆಲ್ಲವೂ ವೈಯಕ್ತಿಕವಾಗಬೇಕು ಎಂದು ತನ್ನ ಘೋಷಣೆಯನ್ನು ಬದಲಿಸಿಕೊಳ್ಳಬೇಕಾಗಿದೆ. ಸೋದರಿತ್ವದ ಸಿದ್ಧಾಂತದಿಂದ ಹುಟ್ಟಿದ ಕರ್ನಾಟಕದ ಮಹಿಳಾ ಚಳವಳಿ ಇಂದು ಅಸ್ಮಿತೆಯ ಚಳವಳಿಗಳ ನಡುವಿನ ಸೋದರಿತ್ವದ ಭಾವದೊಂದಿಗೆ ಗಟ್ಟಿಯಾಗಬೇಕಿದೆ; ಒಡೆವ ಗೋಡೆಗಳಾಗದೆ ಜೋಡಿಸುವ ಸೇತುವೆಗಳಾಗಬೇಕಿದೆ.

ದೂರದ ಮಣಿಪುರದ ಮಹಿಳೆಯರ ಆಕ್ರಂದನ , ಪದಕ ಗೆದ್ದ ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ನಮ್ಮಲ್ಲೇ ಮಠಗಳಲ್ಲಿ ಹೆಣ್ಣಿನ ಮೇಲೆ ನಡೆುುಂತ್ತಿರುವ ಅನಾಚಾರದ ಕೃತ್ಯಗಳು ಹೊರಗಿನ ರಾಜಕೀಯವೆಂದೆನಿಸದೆ ಪ್ರತಿಯೊಬ್ಬ ಮಹಿಳೆಗೂ ಅದು ತಮ್ಮ ವೈಯಕ್ತಿಕ ಸಮಸ್ಯೆಯೆಂದೆನಿಸಬೇಕಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!