ಕಳೆದ ವರ್ಷ ಬಿಡುಗಡೆಯಾಗಿ ಒಂದಷ್ಟು ಸದ್ದು ಮಾಡಿದ ‘ಹೊಂದಿಸಿ ಬರೆಯಿರಿ’ ಚಿತ್ರದ ನಂತತರ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಮುಂದಿನ ನಡೆಯೇನು? ಎಂಬ ವಿಷಯದ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾದರೂ ಜಗನ್ನಾಥ ಮುಂದಿನ ಚಿತ್ರ ಯಾವುದು ಎಂದು ಘೋಷಿಸಿರಲಿಲ್ಲ. ಈಗ ಕೊನೆಗೂ ಹೊಸ ಚಿತ್ರದೊಂದಿಗೆ ಅವರು ವಾಪಸ್ಸಾಗಿದ್ದಾರೆ.
ರಾಮೇನಹಳ್ಳಿ ಜಗನ್ನಾಥ ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹೆಸರು ‘ತೀರ್ಥರೂಪ ತಂದೆಯವರಿಗೆ’ ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಪುತ್ರಿ ಸಿನಿಮಾಗೆ ಕ್ಲ್ಯಪ್ ಮಾಡಿದರೆ, ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಕ್ಯಾಮೆರಾಗೆ ಚಾಲನೆ ನೀಡಿದರು.
‘ತೀರ್ಥರೂಪ ತಂದೆಯವರಿಗೆ’ ಕಥೆಯೇನು ಎಂದು ಜಗನ್ನಾಥ ಬಿಟ್ಟುಕೊಟ್ಟಿಲ್ಲ. ಮೇಲ್ನೋಟಕ್ಕೆ ತಂದೆಗೆ ಮಗ ಬರೆಯುತ್ತಿರುವ ಪತ್ರ ಎಂದನಿಸಿದರೂ, ಇದೊಂದು ತಂದೆ-ಮಗನ ಸೆಂಟಿಮೆಂಟ್ ಕಥೆ ಅಂತನಿಸಿದರೂ, ಚಿತ್ರದಲ್ಲಿ ಅಂತಿಮವಾಗಿ ಅವರು ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಕುತೂಹಲವಿದೆ. ಚಿತ್‍ರದ ಪೋಸ್ಟರ್ ಬಿಡುಗಡೆ ಆಗಿದ್ದು, ಮೂವರು ನಡೆದು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಯಾರು, ಯಾರನ್ನು ಹುಡುಕಿಕೊಂಡು ಎಲ್ಲಿಗೆ ಹೊರಟಿದ್ದಾರೆ ಎನ್ನುವುದು ಚಿತ್ರದ ಕಥೆ.
ತೆಲುಗಿನಲ್ಲಿ ‘ಗುಪ್ಪೆಡಂತ ಮನಸು’ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಪಡೆದಿರುವ ನಿಹಾರ್ ಮುಖೇಶ್, ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸದ್ಯ ಮುಖೇಶ್ ಹೀರೋ ಆಗಿ ಬಣ್ಣ ಹಚ್ಚಿರುವ ‘ಗೀತಾ ಶಂಕರಂ’ ಎಂಬ ತೆಲುಗು ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದರ ಬೆನ್ನೆಲ್ಲೇ ನಿಹಾರ್ ಮುಖೇಶ್, ‘ತೀರ್ಥರೂಪ ತಂದೆಯವರಿಗೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ಮೂಡಿಬರುತ್ತಿದ್ದು, ತೆಲುಗಿನಲ್ಲಿ ‘ಪ್ರಿಯಮೈನ ನಾನ್ನಕು’ ಎಂಬ ಶೀರ್ಷಿಕೆ ಇಡಲಾಗಿದೆ.
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಸಿನಿಮಾವನ್ನು ಅರ್ಪಿಸುತ್ತಿದೆ. ದೀಪಕ್ ಯರಗೇರಾ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದೆ.
ಸದ್ಯ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. 2025ರ ಬೇಸಿಗೆಯಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿದೆ.





