ಬೆಂಗಳೂರು: ಇತಿಹಾಸ ಪ್ರಸಿದ್ದ ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂ ಧರ್ಮಕ್ಕೆ ಮಾತ್ರ ಸೇರಿಲ್ಲ ಎನ್ನುವುದಾದರೆ ವಕ್ಫ್ ಬೋರ್ಡ್‍ಗೆ ಇದನ್ನು ಯಾವಾಗ ಬರೆದುಕೊಡುತ್ತೀರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂಬುದು ಎಲ್ಲರಿಗೂ ಗೊತ್ತು. ಆದರೆ ಯಾವುದೋ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಲು ಇದು ಕೇವಲ ಹಿಂದೂಗಳಿಗೆ ಮಾತ್ರ ಸೇರದೆ ಎಲ್ಲರಿಗೂ ಸೇರಿದ್ದು ಎಂದು ಶಿವಕುಮಾರ್ ಹೊಸ ವ್ಯಾಖ್ಯಾನ ಬರೆದಿದ್ದಾರೆ. ಹಾಗಾದರೆ ವಕ್ಫ್ ಬೋರ್ಡ್‍ಗೆ ಬರೆದುಕೊಡುತ್ತೀರ ಎಂದು ತರಾಟೆಗೆ ತೆಗೆದುಕೊಂಡರು.
ಚಾಮುಂಡಿ ಬೆಟ್ಟದಲ್ಲಿ ತಕ್ಷಣವೇ ರಾಜ್ಯ ಸರ್ಕಾರ ಮಸೀದಿ ನಿರ್ಮಾಣ ಮಾಡಲಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು. ಚಾಮುಂಡೇಶ್ವರಿ ದೇಗುಲವನ್ನು ಹಿಂದೂ ದೇವಾಲಯ ಎಂದು ಎಲ್ಲರೂ ಭಾವಿಸಿದ್ದಾರೆ. ಇದು ಎಲ್ಲರ ಸ್ವತ್ತು ಎಂದು ಕರೆಯುವ ಶಿವಕುಮಾರ್ ಅವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನೆ ಮಾಡಿದರು.
ಚಾಮುಂಡಿ ತಾಯಿಗೆ ಅವಮಾನ ಮಾಡಿದ್ದೀರಿ. ಇದೆ ರೀತಿಯಲ್ಲಿ ನೀವು ಮುಂದುವರಿದರೆ ರಾಜ್ಯವೇ ಧಂಗೆ ಏಳುತ್ತದೆ. ಕೂಡಲೇ ಡಿಕೆಶಿ ತಮ್ಮ ಮಾತನ್ನು ವಾಪಸ್ಸು ಪಡೆಯಬೇಕು. ಮೈಸೂರು ದಸರಾ ಆಯುಧ ಪೂಜೆ, ವಿಜಯದಶಮಿಗೆ ಮಾಡುವಂತದ್ದು ಮೈಸೂರು, ವಿಜಯನಗರ ಸಾಮ್ರಾಜ್ಯದ ಹಂಪಿಯನ್ನು ಹಾಳು ಮಾಡಿದವರು ಇದೇ ಮುಸ್ಲಿಮರು ಎಂದು ವಾಗ್ದಾಳಿ ನಡೆಸಿದರು.
ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆದಿದ್ದಾರೆ. ರಾಜ್ಯದಲ್ಲಿ ಆರೂವರೆ ಕೋಟಿ ಜನ ಇದ್ದಾರೆ. ಇದರಲ್ಲಿ ಒಬ್ಬ ಮಹಿಳೆಯೂ ಸಿಗಲಿಲ್ಲವೇ? ಇವರನ್ನೇ ಉದ್ಘಾಟನೆಗೆ ಆಹ್ವಾನಿಸಬೇಕಿತ್ತೇ? ಅವರ ಇತಿಹಾಸ ಏನು..? ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು ಎಂದು ಟೀಕಾಪ್ರಹಾರ ನಡೆಸಿದರು.
ತಾಯಿ ಭುವನೇಶ್ವರಿಯನ್ನು ವಿಗ್ರಹ ಮಾಡುತ್ತಿದ್ದೀರಿ. ಆದರೆ ಅದೇ ವಿಗ್ರಹದ ಬಗ್ಗೆ ಬಾನು ಮುಸ್ತಾಕ್ ಟೀಕೆ ಮಾಡಿದ್ದಾರೆ. ಭುವನೇಶ್ವರಿ ವಿಗ್ರಹವನ್ನು ಏನು ಪಾಕಿಸ್ತಾನ ಮಾಡಬೇಕಿತ್ತಾ…? ಅದಕ್ಕೆ ಅರಿಶಿನ ಕುಂಕುಮ ಹಚ್ಚದೇ ಏನು ಸಾಬ್ರು ಸೆಂಟ್ ಹೊಡೆಯಬೇಕಿತ್ತಾ?, ಆಯುಧ ಪೂಜೆಗೆ ಅರಿಶಿನ ಕುಂಕುಮ ತಾನೇ ಇಡುವುದು. ಯಾವ ಅರಿಶಿನ ಕುಂಕುಮದ ಬಗ್ಗೆ ಟೀಕೆ ಮಾಡಿದ್ದೀರಿ? ಅದೇ ಅರಿಶಿನ ಕುಂಕುಮವನ್ನೇ ತಾನೇ ಇಲ್ಲಿ ಇಡೋದು. ಮಸೀದಿ ದರ್ಗಾಗೆ ಯಾಕೇ ನಿಮನ್ನು ಕರೆಯೋದಿಲ್ಲವೇ ಎಂದು ಅಶೋಕ್ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.
ಆಪ್ತಮಿತ್ರ ಸಿನಿಮಾದ ರಾರಾ ರಾರಾ ಎಂಬಂತೆ ನಿಮ್ಮನ್ನು ಏನು ಚಾಮುಂಡಿ ಕರೆಯುತ್ತಿದ್ದಾಳಾ..? ಮಿಸ್ಟರ್ ಸಿದ್ದರಾಮಣ್ಣ, ಹಿಮಾಮ್ ಸಾಬಿಗೂ, ಗೋಕುಲಾಷ್ಟಮಿಗೂ ಏನಣ್ಣ ಸಂಬಂಧ? ಎಂದು ವ್ಯಂಗ್ಯವಾಡಿದರು.
ಇದು ಚಾಮುಂಡಿ ತಾಯಿಯ ಪೂಜೆ ಅಲ್ಲ, ಇದು ವೋಟಿನ ಪೂಜೆ. ವಿಜಯದಶಮಿ, ಆಯುಧ ಪೂಜೆ ಏನೆಂಬುದು ಗೊತ್ತಾ…? ಇತಿಹಾಸ ಗೊತ್ತಿಲ್ಲದ ಮುಷ್ತಾಕ್ ಅವರನ್ನು ಕರೆದುಕೊಂಡು ಬಂದು, ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದೀರಿ. ಇದು ಹಿಂದುಗಳ ಸರ್ಕಾರ ಅಲ್ಲ, ಅಲ್ಪಸಂಖ್ಯಾತರ ಸರ್ಕಾರ ಎಂದು ಕಿಡಿಕಾರಿದರು.





