ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಳಿಗಾಲ ಪ್ರಾರಂಭವಾಗಿದ್ದು, ಮುಂದಿನ ಮೂರು ದಿನಗಳು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಶೀತಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ಮತ್ತೊಮ್ಮೆ ತಾಪಮಾನದಲ್ಲಿ ಕುಸಿತ ಕಂಡಿದೆ.
ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕಡಿಮೆ ತಾಪಮಾನ ಕುಸಿತ ಕಂಡಿದೆ. ಅಲ್ಲದೇ ಮುಂದಿನ ಮೂರು ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಆದರೆ ಈಗ ರಾಜ್ಯದಲ್ಲಿ ಕನಿಷ್ಠ ಉಷ್ಠಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ರಾಜ್ಯಾದ್ಯಂತ ಅಧಿಕವಾಗಿ ಮಂಜು ಆವರಿಸಿಕೊಂಡು ಮುಸುಕಿನ ವಾತಾವರಣ ಮುಂದುವರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳಲ್ಲಿಯೂ ಶೀತಗಾಳಿಯ ವಾತವರಣ ಇರಲಿದೆ.
ಇನ್ನೂ ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯಿಂದ ತಿಳಿಸಿದೆ.





