ಬಳ್ಳಾರಿ : ಜಿಲ್ಲೆಯಲ್ಲಿ ಐದು ಸಾವಿರ ವರ್ಷಗಳಷ್ಟು ಹಳೆಯದಾದ ಪ್ರಾಗೈತಿಹಾಸಿಕ ಕಾಲದ ಎರಡು ಅಸ್ಥಿ ಪಂಜರಗಳು ಪತ್ತೆಯಾಗಿದ್ದು, ಇತಿಹಾಸ ಸಂಶೋಧನಾ ವಲಯ ತಿರುಗಿ ನೋಡುವಂತೆ ಮಾಡಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಹಾಗೂ ಕಪ್ಪತಗುಡ್ಡದಲ್ಲಿ ಚಿನ್ನ ಹಾಗೂ ವಜ್ರವಢೂರ್ಯದಂತಹ ನಿಧಿಗಳು ಸಿಕ್ಕ ಬಳಿಕ ಇಂತಹ ಕೂತುಹಲಕಾರಿ ವಿಷಯಗಳು ಹೊರಬರುತ್ತಿದ್ದು, ರಾಜ್ಯದಲ್ಲಿ ಉತ್ಖನನಗಳು ಹೆಚ್ಚಿವೆ. ಇದೀಗ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೇಕಲಕೋಟೆಯ ಉತ್ಖನನ ವೇಳೆ ಗೌಡ್ರಮೂಲೆಯಲ್ಲಿ ಶಿಲಾಯುಗದ ಎರಡು ಅಸ್ಥಿ ಪಂಜರಗಳು ಸಿಕ್ಕಿವೆ.
ಉತ್ಖನನ ಗುಂಡಿಯಲ್ಲಿ ಸುಮಾರು 25 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾದ ಇಬ್ಬರು ವ್ಯಕ್ತಿಗಳ ದೇಹದ ಮೇಲೆ ಕಲ್ಲು ಇರಿಸಿ ಅಂತ್ಯ ಸಂಸ್ಕಾರ ಮಾಡಿದ ರೀತಿಯಲ್ಲಿ ಅಸ್ಥಿ ಪಂಜರಗಳು ಕಂಡು ಬಂದಿವೆ. ಅವುಗಳ ಆಯಸ್ಸು ಸುಮಾರು ಐದು ಸಾವಿರ ವರ್ಷಗಳಷ್ಟಿರಬಹುದು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಅಮೆರಿಕಾದಿಂದ ಆಗಮಿಸಿರುವ ನಮಿತಾ ಎಸ್ ಸುಗಂಧಿ ಅವರ ನೇತೃತ್ವದಲ್ಲಿ ಮೂರು ತಂಡಗಳು ಬಳ್ಳಾರಿ ಸಿರಗುಪ್ಪದಲ್ಲಿ ಉತ್ಖನನ ನಡೆಸುತ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ಉತ್ಖನನ ನಡೆಸುತ್ತಿರುವ ತಂಡದ ಸಹಾಯಕ ನಿರ್ದೇಶಕಿ ನಮಿತಾ, ಶಿಲಾಯುಗದಲ್ಲಿ ಬಳಸುತ್ತಿದ್ದ ಕಲ್ಲಿನ ಆಯುಧಗಳ ಮಾದರಿ ಸುಮಾರು ಒಂದು ಕೆಜಿಯಷ್ಟು ಸಂಗ್ರಹಯೋಗ್ಯ ವಸ್ತುಗಳು ದೊರೆತಿವೆ. ಅವುಗಳಲ್ಲಿ ಸಣ್ಣ ಸಣ್ಣ ಹರಿತವಾದ ಆಯುಧ ಮಾದರಿಯ ಈ ವಸ್ತುಗಳನ್ನು ಮತ್ತಷ್ಟು ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ ಎಂದಿದ್ದಾರೆ.
ಬಹಳಷ್ಟು ಕಲ್ಲಿನ ಆಯುಸ್ಸು ಸುಮಾರು ಮೂರರಿಂದ ಐದು ಸಾವಿರ ವರ್ಷಗಳಷ್ಟಿರಬಹುದು. ಆ ಕಾಲದಲ್ಲಿ ಶವಸಂಸ್ಕಾರ ಪದ್ಧತಿ ಇರುವ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಬೇಕಿದೆ. ಇದು ಮಾನವ ಜೀವ ವಿಕಾಸದ ಅಧ್ಯಯನಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದು ಅವರು ಹೇಳಿದ್ದಾರೆ.





