ಬೆಂಗಳೂರು: ಶಾಸಕ ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ. ಒಂದು ವೇಳೆ ಜಿಟಿಡಿ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದರೆ ಎಲ್ಲವೂ ಸರಿಯಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ನ.27) ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡರಿಗೆ ಪಕ್ಷದಲ್ಲಿರುವ ಸ್ಥಾನಮಾನದ ಕುರಿತು ಅಸಮಾಧಾನವಿರುವುದು ಸತ್ಯ. ಅಲ್ಲದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆಯೂ ಅಸಮಾಧಾನವಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿ ಪಡಿಸಲು ಪಕ್ಷದ ವರಿಷ್ಠರೊಂದಿಗೆ ಹಾಗೂ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಜಿಟಿಡಿ ಅವರಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಲು ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಕರೆ ಮಾಡಿ ಹೇಳಿದ್ದರು. ಆದರೆ ಆ ಸಂದರ್ಭದಲ್ಲಿ ಅವರು ಯಾಕೋ ಬರಲಿಲ್ಲ. ನಾನು ಇಂದು ಸಹ ಸುದ್ದಿಗೋಷ್ಠಿಗೆ ಬರಲು ಹೇಳಿದ್ದೆ. ಹೀಗಿದ್ದರೂ ಅವರು ಬಂದಿಲ್ಲ ಎಂದು ಹೇಳಿದ್ದಾರೆ.