Mysore
25
scattered clouds

Social Media

ಮಂಗಳವಾರ, 05 ನವೆಂಬರ್ 2024
Light
Dark

ರಾಜ್ಯದ ಕೈಗಾರಿಕಾ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ, ತ್ವರಿತ ಕ್ರಮಕ್ಕೆ ಸೂಚನೆ: ಎಂ ಬಿ ಪಾಟೀಲ

ಬೆಂಗಳೂರು: ರಾಜ್ಯದ ನಾನಾ ಕೈಗಾರಿಕಾ ಪ್ರದೇಶಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಸಂಬಂಧಿಸಿದ ವಿವಿಧ ಇಲಾಖೆಗಳೊಂದಿಗೆ ಸೋಮವಾರ ಇಲ್ಲಿ ಸಭೆ ನಡೆಸಿ, ಕಾರ್ಯಸಾಧುವಾದ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು. ಜೊತೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದ್ದರು.

ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ, ಬೆಂಗಳೂರು ಜಲ ಮಂಡಲಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲ, `ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಇದಲ್ಲದೆ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪ್ರತಿದಿನ 45 ಎಂಎಲ್.ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ.

ಇದನ್ನು ಹಿಡಕಲ್ ಜಲಾಶಯದಿಂದ ಪೂರೈಸಬಹುದು. ಹಾಗೆಯೇ, ವಿಜಯಪುರ ಕೈಗಾರಿಕಾ ಪ್ರದೇಶಕ್ಕೆ ಕೂಡ ಕೃಷ್ಣಾ ಜಲಾಶಯದಿಂದ ನಿತ್ಯವೂ ಇಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಸಬೇಕಾಗಿದೆ.

ಕಲಬುರಗಿ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ಮತ್ತು ಭೀಮಾ ನದಿಗಳಿಂದ ದಿನವೂ 7 ಎಂಎಲ್ ಡಿ, ಬಳ್ಳಾರಿ ಕೈಗಾರಿಕಾ ಪ್ರದೇಶಕ್ಕೆ ತುಂಗಭದ್ರಾ ಅಣೆಕಟ್ಟೆಯಿಂದ 13 ಎಂಎಲ್ ಡಿ, ರಾಯಚೂರು ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ 13 ಎಂಎಲ್ ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ.

ಒಟ್ಟಾರೆ ಪ್ರತಿನಿತ್ಯ 290 ಎಂ.ಎಲ್.ಡಿ ನೀರು ಈ ಜಿಲ್ಲೆಗಳಿಗೆ ಬೇಕಾಗಿದೆ. ಇದನ್ನು ಬಗೆಹರಿಸದೆ ಹಾಗೆಯೇ ಬಿಟ್ಟರೆ ರಾಜ್ಯದ ಕೈಗಾರಿಕಾ ಬೆಳವಣಿಗೆಯೇ ಹಿನ್ನಡೆ ಕಾಣಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಳೆ ಮೈಸೂರು ಭಾಗದಲ್ಲಿರುವ ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಅದನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುತ್ತಿದೆ.

ಆದರೆ, ಇಲ್ಲೆಲ್ಲ ಕುಡಿಯುವ ನೀರಿನ ವಿಪರೀತ ಅಭಾವವಿದೆ. ಆದ್ದರಿಂದ, ಎಲ್ಲೆಲ್ಲಿ ಎಷ್ಟು ನೀರಿನ ಲಭ್ಯತೆ ಇದೆ, ಇಲ್ಲಿಗೆಲ್ಲ ಯಾವ್ಯಾವ ಮೂಲಗಳಿಂದ ಕುಡಿಯುವ ನೀರನ್ನು ಪೂರೈಸಬಹುದು ಎಂದು ಕಂಡುಕೊಳ್ಳಬೇಕು. ಈ ಸಂಬಂಧವಾಗಿ ಇನ್ನೊಂದು ವಾರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ನುಡಿದರು.

ಕೈಗಾರಿಕೆಗಳಿಗೆ ಕುಡಿಯುವ ನೀರು ಪೂರೈಕೆ ಪ್ರಾಥಮಿಕ ಜವಾಬ್ದಾರಿಯಾಗಿದೆ. ರಾಜ್ಯದ ಉದ್ಯಮಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಇಲಾಖೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಪಾಟೀಲ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ