ಹೊಸದಿಲ್ಲಿ : ಸುಹಾಸ್ ಶೆಟ್ಟಿಯನ್ನು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಕರ್ನಾಟಕದ ವಿವಿಧ ಜಿಲ್ಲೆಗಳ 18 ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್‌ಐಎ, ಕಳೆದ ಮೇ ತಿಂಗಳಲ್ಲಿ ಮಂಗಳೂರು ನಗರದ ಬಜ್ಪೆ ಪ್ರದೇಶದಲ್ಲಿ ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಅವರನ್ನು ಆರೋಪಿ ಅಬ್ದುಲ್ ಸಫ್ವಾನ್ ಮತ್ತು ಇತರರು ಮಾರಕ ಆಯುಧಗಳನ್ನು ಬಳಸಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆಯು ಸಮಾಜದಲ್ಲಿ ಭಯೋತ್ಪಾದನೆಯನ್ನು ಹರಡುವ ಉದ್ದೇಶವನ್ನು ಹೊಂದಿತ್ತು ಎಂದು ವಿವರಿಸಿದೆ.
ಜೂನ್‌ನಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡ ಎನ್ಐಎ, ಪ್ರಕರಣದಲ್ಲಿ ಬಂಧಿತರಾದ 12 ವ್ಯಕ್ತಿಗಳು ಮತ್ತು ವಿವಿಧ ಶಂಕಿತರ ನಿವಾಸಗಳನ್ನು ಶೋಧಿಸಿದೆ.
ಮಂಗಳೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆಸಿದ ಶೋಧದಲ್ಲಿ 11 ಮೊಬೈಲ್ ಫೋನ್‌ಗಳು, 13 ಸಿಮ್ ಕಾರ್ಡ್‌ಗಳು ಮತ್ತು 8 ಮೆಮೊರಿ ಕಾರ್ಡ್‌ಗಳು ಮತ್ತು ಇತರ ಅಪರಾಧ ದಾಖಲೆಗಳು ಸೇರಿದಂತೆ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಹತ್ಯೆಯ ಹಿಂದಿನ ಪಿತೂರಿಯ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದೆ.





