ಬೆಂಗಳೂರು: ರಾಜ್ಯದಲ್ಲಿ ಹುಬ್ಬಳಿಯ ನೇಹಾ, ಅಂಜಲಿ ಕೊಡಗಿನ ಮೀನಾ ಕೊಲೆ ಪ್ರಕರಣ ಮಾಸುವೆ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
೨೧ ವರ್ಷದ ವಿದ್ಯಾರ್ಥಿನಿ ಪ್ರಭುದ್ಧಳ ಮೃತದೇಹ ಮನೆಯ ಬಾತ್‌ರೂಂನಲ್ಲಿ ಪತ್ತೆಯಾಗಿದ್ದು, ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿ, ಮೃತ ಯುವತಿಯ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನನ್ನ ಮಗಳನ್ನು ಜೋಪಾನ ಮಾಡಿದ್ದೆ ಯಾರೋ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಆಫೀಸ್‌ನಲ್ಲಿದ್ದ ನನಗೆ ಮಧ್ಯಾಹ್ನ ಫೋನ್ ಮಾಡಿದ್ದಳು. ಸ್ನೇಹಿತರ ಜೊತೆ ಪಾನಿಪುರಿ ತಿಂದು ಮನೆಗೆ ಹೋಗ್ತಿನಿ ಎಂದಿದ್ದಳು. ನಂತರ ಆಫೀಸ್ ಮುಗಿಸಿ ಬಂದು ನೋಡಿದಾಗ ಮಗಳು ಬಾತ್‌ರೂಂನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಇತ್ತು ಎಂದು ಘಟನೆ ಕುರಿತು ತಾಯಿ ಸೌಮ್ಯ ಕಣ್ಣೀರು ಹಾಕಿದ್ದಾರೆ.
ಪ್ರಭುದ್ಧ ಈ ಹಿಂದೆ ಎರಡು-ಮೂರು ಬಾರಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗುತ್ತಿದೆ. ಆದರೆ ತಾಯಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ಎಂದು ತಾಯಿ ಸೌಮ್ಯ ಗೋಳಾಡಿದ್ದಾರೆ.
೨೧ ವರ್ಷದ ವಿದ್ಯಾರ್ಥಿಯ ಕೈ ಹಾಗೂ ಕುತ್ತಿಗೆಗೆ ಚಾಕು ಇರಿತ ಆಗಿದೆ. ಮನೆಯ ಬಾತ್‌ರೂಂನಲ್ಲಿ ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಿಳಿದು ಬಂದಿಲ್ಲ. ಇದು ತನಿಖೆಯಿಂದ ಗೊತ್ತಾಗುತ್ತದೆ. ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.