Mysore
26
scattered clouds

Social Media

ಶನಿವಾರ, 31 ಜನವರಿ 2026
Light
Dark

ನೋಟಿಸ್ ನೀಡದೆ ಜಮೀನು ದಾಳಿಗೆ ಸಜ್ಜಾಗಿದ್ದ ರಾಜ್ಯ ಸರ್ಕಾರ: ಹೆಚ್‌ಡಿಕೆ

ಹಾಸನ: ನಾನು ಕಷ್ಟಪಟ್ಟು ಬಿಡದಿಯ ಬಳಿ ಖರೀದಿಸಿದ 45 ಎಕರೆ ಜಮೀನನ್ನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರಕಾರ ಹೊಂಚು ಹಾಕುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹಾಸನದಲ್ಲಿ ಅರೆಸೇನಾ ಪಡೆಯ ನಿವೃತ್ತ ಯೋಧರ ಭವನ ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಆ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ನನಗೆ ನೋಟಿಸ್ ನೀಡದೆ ದಾಳಿ ನಡೆಸಲು ಹೊರಟಿದ್ದರು. ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ನಲವತ್ತು ವರ್ಷಗಳ ಹಿಂದೆ ಭೂಮಿಯನ್ನು ಖರೀದಿ ಮಾಡಿದ್ದೇನೆ. ನೀವು ಬಂದು ಸರ್ವೇ ಮಾಡುವುದಾದರೆ ಭೂಮಿಯ ಮಾಲೀಕನಾದ ನನಗೆ ಮೊದಲು ನೋಟಿಸ್ ಕೊಡಿ ನಂತರ ಸರ್ವೇ ಮಾಡಿಕೊಳ್ಳಿ ಎಂದು ಹೇಳಿದರು.

ಸಾಂವಿಧಾನಿಕ ವ್ಯವಸ್ಥೆಗಳು ಸತ್ಯಾಸತ್ಯತೆ ನೋಡಲಿ

ಸರ್ವೇ ಮಾಡಿಕೊಂಡು ಒತ್ತುವರಿ ಆಗಿದ್ದರೆ ಆ ಭೂಮಿ ವಾಪಸ್ ಪಡೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ ಈ ದೇಶದಲ್ಲಿ ಕಾನೂನು, ಸಂವಿಧಾನ ಎನ್ನುವುದು ಇದೆ. ಅದು ಎಲ್ಲರಿಗೂ ಸಮಾನ ಅಲ್ಲವೇ? ಅಂತಹ ಸಾಂವಿಧಾನಿಕ ವ್ಯವಸ್ಥೆಗಳಿಗೆ ನನ್ನ ಮನವಿ ಇಷ್ಟೇ. ನೀವು ಕೆಲ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಸಂದರ್ಭದಲ್ಲಿ ಸತ್ಯಾತ್ಯತೆ ಗಮನಿಸಿ. ದಾಖಲೆ ನೋಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಈ ಸಲವೂ ಖೋತಾ ಬಜೆಟ್‌ ಗ್ಯಾರಂಟಿ

ಕಳೆದ ನಲವತ್ತು ವರ್ಷಗಳಿಂದ ದೇವೇಗೌಡರ ಕುಟುಂಬ ಮುಗಿಸಬೇಕು ಎನ್ನುವ ಹುನ್ನಾರ ನಡೆಯುತ್ತಲೇ ಇದೆ. ಈ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಜನರು ನನ್ನ ಕೈಗೆ ಐದು ವರ್ಷಗಳ ಸರಕಾರ ಕೊಟ್ಟಿದ್ದರೆ ಇದಕ್ಕೆಲ್ಲ ಚರಮಗೀತೆ ಹಾಡುತ್ತಿದ್ದೆ. ರಾಜ್ಯದ ಸಾಲವನ್ನು ₹7 ಲಕ್ಷ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ.

ಒಮ್ಮೆ ₹2,500 ಕೋಟಿ, ಇನ್ನೊಮ್ಮೆ ₹25,000 ಕೋಟಿ ಸಾಲ ಮನ್ನಾ ಮಾಡಿದೆ. 2006ರಲ್ಲಿ ಬಜೆಟ್ ಗಾತ್ರ ₹34,000 ಕೋಟಿ. 180 ಪ್ರಥಮ ದರ್ಜೆ ಕಾಲೇಜು, 500 ಜ್ಯೂನಿಯರ್ ಕಾಲೇಜು, 1400 ಹೈಸ್ಕೂಲ್ ಮಂಜೂರು ಮಾಡಿದೆ. 56,000 ಶಿಕ್ಷಕರನ್ನು ನೇಮಕ ಮಾಡಿದೆ. ಈ ಸರಕಾರ ಏನು ಕೊಟ್ಟಿದೆ? ಎಷ್ಟು ಜನ ಯುವಜನರಿಗೆ ಉದ್ಯೋಗ ಕೊಟ್ಟಿದೆ? ಇಷ್ಟೊಂದು ಸಾಲ ಮಾಡುತ್ತಿದ್ದಾರೆ. ಮುಂದಿನ ಬಜೆಟ್ ನಲ್ಲಿ ಇನ್ನೆಷ್ಟು ಲಕ್ಷ ಕೋಟಿ ಸಾಲ ಮಾಡುತ್ತಾರೋ ಗೊತ್ತಿಲ್ಲ. ₹1,80,000 ಕೋಟಿ ಆದಾಯ ನಿರೀಕ್ಷೆ ಮಾಡಿದ್ದರು, ಈ ಸಲವೂ ಖೋತಾ ಬಜೆಟ್ ಗ್ಯಾರಂಟಿ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

Tags:
error: Content is protected !!