ಬೆಂಗಳೂರು: ಹೇಮಾವತಿ ನೀರು ಹಂಚಿಕೆ ವಿಷಯದಲ್ಲಿ ಜನರ ಮಧ್ಯೆ ದ್ವೇಷ ಮೂಡಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಭಾಗದ ತಾಲ್ಲೂಕುಗಳಿಗೆ ಹೇಮಾವತಿ ಅತ್ಯವಶ್ಯಕವಾಗಿದ್ದು, ರಾಮನಗರ ಜಿಲ್ಲೆಗೆ ನೀರನ್ನು ಹರಿಸುವ ರಾಜ್ಯಸರ್ಕಾರದ ಧೋರಣೆ ಜನವಿರೋಧಿಯಾಗಿದೆ ಎಂದು ಆರೋಪಿಸಿದರು.
ನೆರೆಯ ಆಂಧ್ರಪ್ರದೇಶ ಈಗಾಗಲೇ ಕೃಷ್ಣಾ ನದಿ ನೀರನ್ನು ಕೋಲಾರ ಹಾಗೂ ತುಮಕೂರು ಜಿಲ್ಲೆಯ ಗಡಿಭಾಗಗಳಿಗೆ ಹರಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಹೇಮಾವತಿ ನೀರನ್ನು ರಾಮನಗರಕ್ಕೆ ಬಳಸುವ ಯೋಜನೆ ರೂಪಿಸಿರುವುದು ಜನರ ಮಧ್ಯೆ ದ್ವೇಷ ಮೂಡಿಸುವ ಹುನ್ನಾರ ಮಾಡುತ್ತಿದೆ ಎಂದು ಕಿಡಿಕಾರಿದರು.
ಪ್ರಸ್ತುತ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಅದನ್ನು ಲೆಕ್ಕಿಸದೆ ಯೋಜನೆ ರೂಪಿಸಿರುವುದರ ಹಿಂದೆ ಅಡಗಿರುವ ಮರ್ಮ ಏನೆಂದು ಎಲ್ಲರಿಗೂ ತಿಳಿಯುತ್ತದೆ. ಜನರ ಮಧ್ಯೆ ಗೊಂದಲ, ದ್ವೇಷ ಭಾವನೆ ಮೂಡಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.





