Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಿದ್ದಸಿರಿ ಎಥನಾಲ್ ಕೈಗಾರಿಕೆ| ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ: ಈಶ್ವರ ಖಂಡ್ರೆ

ಬೆಂಗಳೂರು: ಕಲ್ಬುರ್ಗಿ ಜಿಲ್ಲೆ ಚಿಂಚೋಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸೇರಿದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಾರ್ಯಾಚರಣೆ ಸಮ್ಮತಿ ಪತ್ರ ನೀಡುವಂತೆ ಹೈಕೋರ್ಟ್ ತೀರ್ಪನ್ನು ಪರಿಶೀಲಿಸಿ, ಕಾಲಮಿತಿಯೊಳಗೆ ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಸಿದ್ದಸಿರಿ ಕಾರ್ಖಾನೆ ಈ ಹಿಂದೆ ಅನುಮತಿ ಇಲ್ಲದೆ ಬಾಯ್ಲರ್ ಸ್ಥಾಪನೆ ಮಾಡಿದ್ದು, ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಹಂತದಲ್ಲಿದ್ದರೂ ನಿಯಮ ಉಲ್ಲಂಘಿಸಿ ಲಕ್ಷಾಂತರ ಟನ್ ಕಬ್ಬು ಅರೆದಿತ್ತು ಹೀಗಾಗಿ ಮಂಡಳಿ ನಿಯಮಾನುಸಾರ ಕ್ರಮ ವಹಿಸಿತ್ತು ಎಂದರು.

ಈ ಎಥನಾಲ್ ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿ ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯೇ 1.58 ಕೋಟಿ ದಂಡ ವಿಧಿಸಿತ್ತು, ದಂಡ ಕಟ್ಟಿದ ಬಳಿಕವೂ ಘಟಕ ಸ್ಥಾಪನೆಗೆ ಅನುಮೋದನೆ ಪಡೆಯದೆ ಮತ್ತೆ ಕಾರ್ಯಾಚರಣೆ ಮಾಡಿದ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಿದ್ದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಾಗಲೀ, ದ್ವೇಷವಾಗಲೀ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೂರ್ವಾನುಮತಿ ಇಲ್ಲದೆ ಕಾರ್ಖಾನೆ ಮತ್ತೆ ಲಕ್ಷಾಂತರ ಟನ್ ಕಬ್ಬು ನುರಿಸಿ ಎಥನಾಲ್ ಉತ್ಪಾದಿಸಿರುವುದೇ ಅಲ್ಲದೆ, ನದಿಗೆ ತ್ಯಾಜ್ಯ ಹರಿಯಬಿಟ್ಟಿರುವ ಆರೋಪವೂ ಇದೆ. ಇದು ಜಲ ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದರು.

ಪ್ರಸ್ತುತ ಹೈಕೋರ್ಟ್ ಆದೇಶ ನೀಡಿದೆ. ನಿನ್ನೆಯಷ್ಟೇ ಯತ್ನಾಳ್ ಅವರು ಕೋರ್ಟ್ ಆದೇಶದ ದೃಢೀಕೃತ ಪ್ರತಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಮಂಡಳಿ, ಕಾನೂನು ವಿಭಾಗದೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸುತ್ತದೆ. ನ್ಯಾಯಾಲಯ 4 ವಾರ ಕಾಲಾವಕಾಶ ನೀಡಿರುವಾಗ ಯತ್ನಾಳ್ ಅವರು ಒಂದೇ ದಿನದಲ್ಲಿ ಅನುಮತಿ ಪತ್ರ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಮಂಡಳಿ ಅಧಿಕಾರಿಗಳಿಗೆ ಕೆಲಸ ಮಾಡಲು ಕಾಲಾವಕಾಶ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಯತ್ನಾಳ್ ಅವರು ಆರೋಪಿಸಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇವಲ ಆರೋಪ ಮಾಡುವ ಬದಲು ದಾಖಲೆ ನೀಡಿದರೆ, ತನಿಖೆಗೆ ಆದೇಶ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾವು ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಈಶ್ವರ ಖಂಡ್ರೆ, ಬಿಜೆಪಿ ಶಾಸಕರು ಕೂಡ ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ತಿಳಿಸಿದರು.

Tags: