Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಿ ದಾಖಲೆ ಮಾಡಲಿ: ಗೃಹ ಸಚಿವ ಜಿ.ಪರಮೇಶ್ವರ್‌

ಬೆಂಗಳೂರು: ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಆಗಲಿ, ದಾಖಲೆ ಮಾಡಲಿ ಎಂದು ನಾನೂ ಕೂಡ ಹಾರೈಸುತ್ತೇನೆ. ಅವರು ಈ ಐದು ವರ್ಷ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪಕ್ಷದ ಶಾಸಕರು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್‌ ನಮಗೆ ಎರಡೂವರೆ ವರ್ಷ ಅಧಿಕಾರ ಎಂದು ಹೇಳಿರಲಿಲ್ಲ. ಹೀಗಾಗಿ ನಾವೆಲ್ಲಾ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದೇ ಭಾವಿಸಿದ್ದೇವೆ ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾನು ಈಗ ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್‌ ತೀರ್ಮಾನ ಏನೇ ಇದ್ದರೂ ಅದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದರು.

ಇನ್ನು ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಮೊದಲು ಸುಗ್ರೀವಾಜ್ಞೆ ಕಳುಹಿಸಿದಾಗ ರಾಜ್ಯಪಾಲರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ರಾಜ್ಯಪಾಲರ ಪ್ರಶ್ನೆಗಳಿಗೆಲ್ಲ ಸರ್ಕಾರ ಉತ್ತರ ಕಳುಹಿಸಿತ್ತು. ಅದನ್ನೆಲ್ಲಾ ಪರಿಶೀಲಿಸಿ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ. ತಕ್ಷಣವೇ ಅದು ಜಾರಿಗೆ ಬಂದಿದೆ ಎಂದರು.

ಇನ್ನು ಮೈಸೂರಿನ ಉದಯಗಿರಿ ಠಾಣೆ ಮುಂದೆ ಗಲಾಟೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಅವರನ್ನು ಬಿಡುವ ಮಾತೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎಂದರು.

 

Tags: