ಬೆಂಗಳೂರು: ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜೊತೆ ಕಾಂಗ್ರೆಸ್ ನಿಲ್ಲಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಕದನ ವಿರಾಮಕ್ಕೆ ಒಪ್ಪಿದ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಿರುವ ಬಗ್ಗೆ ಕಿಡಿಕಾರಿದರು.
ಕಾಂಗ್ರೆಸ್ ರಕ್ತವೆಲ್ಲಾ ಬರೀ ದೇಶ ವಿರೋಧಿ ರಕ್ತ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್‌ನವರು ಜೋಕ್ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶದ ಜೊತೆ ನಿಂತು, ಸೈನಿಕರಿಗೆ ಬೆಂಬಲ ಕೊಡಬೇಕಿತ್ತು. ಇದನ್ನು ಮಾಡಲು ಆಗದಿದ್ದರೆ ಬಾಯಿ ಮುಚ್ಚಿಕೊಂಡು ಇರಬೇಕಿತ್ತು ಎಂದು ಕಿಡಿಕಾರಿದರು.
ಇನ್ನು ಪಾಕಿಸ್ತಾನ ಬಹಿರಂಗವಾಗಿಯೇ ಉಗ್ರರ ಕುಟುಂಬಗಳಿಗೆ ಪರಿಹಾರ ಕೊಟ್ಟಿದೆ. ಇದನ್ನು ನೋಡಿಯಾದರೂ ಕಾಂಗ್ರೆಸ್ ಸುಮ್ಮನಿರಬೇಕಿತ್ತು. ಕಾಂಗ್ರೆಸ್ ನಾಯಕ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಮಾತನಾಡುತ್ತಾರೆ. ಕೇಂದ್ರ ಸರ್ಕಾರವನ್ನು ತೆಗೆಯುವುದು ಹೇಗೆ ಎಂದು ಚರ್ಚೆ ನಡೆಸುತ್ತಾರೆ. ಕಾಂಗ್ರೆಸ್ ಮಾನಸಿಕತೆ ದೇಶದ ಜನರಿಗೆ ಗೊತ್ತಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.





