Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ವೀರಪ್ಪನ್‌ ತಮ್ಮ ತಂದೆಯನ್ನು ಅಪಹರಿಸಿದಾಗ ಎಸ್‌ಎಂಕೆ ಮಾಡಿದ ಸಹಾಯ ಮರೆಯಲು ಅಸಾಧ್ಯ: ಶಿವರಾಜ್‌ಕುಮಾರ್‌

ಬೆಂಗಳೂರು: ವೀರಪ್ಪನ್‌ ತಮ್ಮ ತಂದೆ ಡಾ.ರಾಜ್‌ ಕುಮಾರ್‌ ಅವರನ್ನು ಅಪಹರಿಸಿದಾಗ ಅಂದಿನ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರು ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಎಂದು ನಟ ಶಿವರಾಜ್‌ ಕುಮಾರ್‌ ತಿಳಿಸಿದ್ದಾರೆ.

ಸದಾಶಿವನಗರದಲ್ಲಿ ಇಂದು(ಡಿ.10) ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌.ಎಂ.ಕೃಷ್ಣ ಅವರು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿದ್ದರು. ತಮ್ಮ ತಂದೆಯನ್ನು ವೀರಪ್ಪನ್‌ ಅಪಹರಣ ಮಾಡಿದಾಗ ಎಸ್‌.ಎಂ.ಕೃಷ್ಣ ಅವರು ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಅವರ 93 ವರ್ಷದ ಜೀವನ ಸಾರ್ಥಕವಾಗಿದ್ದು, ಅತ್ಯಾಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಅಂಬರೀಶ್‌ ಮತ್ತೆ ಕಾಂಗ್ರೆಸ್‌ಗೆ ತೆರಳಲು ಎಸ್‌.ಎಂ.ಕೃಷ್ಣ ಕಾರಣ: ಮಾಜಿ ಸಂಸದೆ ಸುಮಲತಾ

ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ಸುಮಲತಾ ಅವರು ಮಾತನಾಡಿ, ಅಂಬರೀಶ್‌ ಅವರು ಮತ್ತೆ ಕಾಂಗ್ರೆಸ್‌ಗೆ ತೆರಳಲು ಎಸ್‌.ಎಂ.ಕೃಷ್ಣ ಕಾರಣವಾಗಿದ್ದಾರೆ. ನಾನು ರಾಜಕೀಯ ಜೀವನ ಪ್ರಾರಂಭ ಮಾಡುವ ಮುನ್ನ ಎಸ್‌ಎಂಕೆ ಅವರ ಆರ್ಶೀವಾದ ಪಡೆದಿದ್ದೆ. ಎಸ್‌.ಎಂ.ಕೃಷ್ಣರವರು ನಮ್ಮ ಮಂಡ್ಯದ ಮಣ್ಣಿನ ಮಗರಾಗಿದ್ದು, ಡಿಗ್ನಿಫೈಡ್‌ ಪೊಲಿಟಿಷಿಯನ್‌ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಎಸ್‌ಎಂಕೆ ಅವರಂತಹ ರಾಜಕಾರಣಿಗಳನ್ನು ಇಂದಿನ ರಾಜಕಾರಣದಲ್ಲಿ ನೋಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌.ಎಂ.ಕೃಷ್ಣ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ನಾವಿಬ್ಬರೂ ಸೇರಿ ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇವೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳು ಜಾರಿಯಾಗುವುದಕ್ಕೆ ಎಸ್.ಎಂ.ಕೃಷ್ಣ ಅವರೇ ಮುಖ್ಯ ಕಾರಣರಾಗಿದ್ದಾರೆ. ಆದರೆ ಇಂದು ಅವರ ಅಗಲಿಕೆ ನಮಗೆಲ್ಲಾ ಅಪಾರ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tags:
error: Content is protected !!