Mysore
20
overcast clouds
Light
Dark

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕವಾಗಿದ್ದಾರೆ. ಶುಕ್ರವಾರ(ಜು.26)ನಡೆದ ಸಚಿವ ಸಂಪುಟ ಸಭೆಯಲ್ಲಿ ರಜನೀಶ್‌ ಗೋಯಲ್‌ ಅವರಿಂದ ತೆರವಾಗೋ ಸ್ಥಾನಕ್ಕೆ ಅವರ ಪತ್ನಿ, ಹಿರಿಯ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಪ್ರಸ್ತುತ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರ ಅಧಿಕಾರವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಅವರ ಪತ್ನಿ, ಹಿರಿಯ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಆಗಸ್ಟ್‌ 1 ರಂದು ಶಾಲಿನಿ ರಜನೀಶ್‌ ಅವರು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

1989ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಆದ ಶಾಲಿನಿ ಅವರ ಸೇವಾವಧಿ 2027ರ ಜೂನ್‌ 30ರ ವರೆಗೆ ಇರಲಿದ್ದು, ಮೂರು ವರ್ಷಗಳ ಕಾಲ ದೀರ್ಘಾವಧಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ರಾಜ್ಯದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ 2ನೇ ದಂಪತಿ ಎಂಬ ಹೆಗ್ಗಳಿಗೆ ಶಾಲಿನಿ ರಜನೀಶ್‌ ಮತ್ತು ರಜನೀಶ್‌ ಗೋಯಲ್‌ ಅವರದ್ದಾಗಲಿದೆ.

ಈ ಹಿಂದೆ 2000 ಇಸವಿಯಲ್ಲಿ ಬಿ.ಕೆ ಭಟ್ಟಾಚಾರ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2000 ಇಸವಿಯ ಜನವರಿ 1 ರಿಂದ 2002ರ ಅವಧಿಯಲ್ಲಿ ಅವರ ಪತ್ನಿ ತೆರೆಸಾ ಭಟ್ಟಾಚಾರ್ಯ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ಕರ್ನಾಟಕದ ಸಿಎಸ್ ಆಗಿ ಸೇವೆ ಸಲ್ಲಿಸಿದ ಮೊಟ್ಟ ಮೊದಲ ದಂಪತಿಯಾಗಿದ್ದರು.