Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಫಲ್ಗುಣಿ ನದಿಯಲ್ಲಿ ಶೋಧ: ಇನ್ನೂ ಸಿಗದ ಮುಮ್ತಾಜ್‌ ಅಲಿ ಸುಳಿವು

ಮಂಗಳೂರು: ಮುಸ್ಲಿಂ ಮುಖಂಡ, ಮಂಗಳೂರು ಉತ್ತರ ಭಾಗದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (52) ಭಾನುವಾರ ಮುಂಜಾನೆ ನಾಪತ್ತೆಯಾಗಿದ್ದಾರೆ. ಅವರ ಬಿಎಂಡ್ಲ್ಯೂ ಕಾರು ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರಿಗಾಗಿ ಬೆಳಿಗ್ಗೆ 7 ಗಂಟೆಯಿಂದ ಕೂಳೂರು ಬಳಿ ಫಲ್ಗುಣಿ ನದಿಯಲ್ಲಿ ಶೋಧ ನಡೆಯುತ್ತಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ.

ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡದವರು ಹಾಗೂ ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಆರೇಳು ದೋಣಿಗಳು ಕೂಳೂರು ಸೇತುವೆಯ ತಳಭಾಗದಲ್ಲಿ ಫಾಲ್ಗುಣಿ ನದಿಯಲ್ಲಿ ಮುಮ್ತಾಜ್‌ ಅಲಿ ಅವರಿಗಾಗಿ ಶೋಧ ನಡೆಯುತ್ತಿದೆ. ಸತತ 7 ಗಂಟೆಯಿಂದ ಶೋಧ ನಡೆಸಿದರು ಅವರ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ನದಿಯಲ್ಲಿ ಹುಡುಕಿದರೂ ಮುಮ್ತಾಜ್‌ ಅಲಿ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದಾರೆ. ನದಿಯಲ್ಲಿ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್, ಅಗ್ನಿಶಾಮಕದಳದಿಂದ ಹುಡುಕಾಟ ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಸ್ಥಳದಲ್ಲಿದ್ದು ಶೋಧಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ನೀವು ಚೆನ್ನಾಗಿರಿ, ನಾನಿನ್ನು ಬದುಕಿರುವುದಿಲ್ಲ
ಮುಮ್ತಾಕ್‌ ಅವರು ಮುಂಜಾನೆ 3ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಾರೆ. ಅದೇ ಸಮಯದಕ್ಕೆ ಕುಟುಂಬದ ವಾಟ್ಸ್‌ ಆಪ್‌ ಬಳಗಕ್ಕೆ ಧ್ವನಿ ಮುದ್ರಿತ ಸಂದೇಶ ಕಳುಹಿಸಿ, ನೀವು, ಚೆನ್ನಾಗಿರಿ ನಾನು ಸಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬಳಿಕ 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಮೇಲೆ ಮುಮ್ತಾಜ್ ಬಿಎಂಡಬ್ಲ್ಯು ಕಾರು ದೊರೆತಿದೆ. ಅವರ ಪುತ್ರಿಗೆ ಈ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ನಾಪತ್ತೆಯಾಗಿರುವ ಮಮ್ತಾಜ್ ಆಲಿ ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಕಮಿಷನರ್ ಎದುರು ಮೊಯಿದ್ದೀನ್ ಬಾವ ಕಣ್ಣೀರು ಹಾಕಿ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಘಟನೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು, ಮುಂಜಾನೆ ಮೂರು ಗಂಟೆಗೆ ಮನೆಯಲ್ಲಿ ಕೆಲ ಕಾರಣಗಳಿಂದ ಬಿಎಂಡಬ್ಲೂ ಕಾರ್ ಚಲಾಯಿಸಿ ಬಂದಿದ್ದರು. ಕುಳೂರು ಸೇತುವೆ ಯಲ್ಲಿ ಕಾರು ಅಪಘಾತವಾಗಿ ಕಾಣೆಯಾಗಿದ್ದಾರೆ. ಈ ವಿಚಾರ ಮಗಳಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸೇತುವೆಯಿಂದ ಕೆಳಗೆ ಹಾರಿರುವ ಬಗ್ಗೆ ಸಂಶಯ ಇದೆ. ವಿವಿಧ ತಂಡಗಳು ನದಿಯಲ್ಲಿ ಶೋಧ ಕಾರ್ಯ ಮಾಡುತ್ತಿದ್ದಾರೆ, ಎಫ್ ಎಸ್ ಎಲ್ ಅಧಿಕಾರಿಗಳು ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದಿಂದ ಕೆಲ ಮಾಹಿತಿಗಳು ಬಂದಿದೆ, ಘಟನೆಯ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Tags: