ಬೆಂಗಳೂರು: ಇನ್ನು ಮುಂದೆ ಶಾಲಾ ಮಕ್ಕಳಿಗೆ ಕೊಡುತ್ತಿದ್ದ ಚಿಕ್ಕಿಯನ್ನು ನಿಲ್ಲಿಸಲಾಗಿದ್ದು, ಮೊಟ್ಟೆ ಹಾಗೂ ಬಾಳೆಹಣ್ಣನ್ನು ಮಾತ್ರ ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ಯೋಜನೆಯಡಿ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಣೆ ಮಾಡಬೇಕು. ಚಿಕ್ಕಿ ವಿತರಣೆ ಮಾಡಬಾರದು ಎಂದು ರಾಜ್ಯ ಸರ್ಕಾರ ಇಂದು ಆದೇಶ ನೀಡಿದೆ.
2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ 1 ರಿಂದ 8ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣು/ಚಿಕ್ಕಿಯನ್ನು ವಿತರಿಸಲು ಆದೇಶಿಸಲಾಗಿತ್ತು.
ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎನ್ನಬಹುದಾದ ಕೊಬ್ಬಿನಾಂಶ ಹೆಚ್ಚಿಗೆ ಇದೆ. ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಅಲ್ಲದೇ ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದಿದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕಿ ವಿತರಣೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.