ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ ಬದಲಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು(ನ.27) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರೂ ಸಹ ಕೇವಲ ಎರಡು ವರ್ಷಕ್ಕೆ ಸಚಿವ ಸ್ಥಾನ ಬದಲಾವಣೆಯಾಗತ್ತದೆ ಹೇಳಿಲ್ಲ. ಆದರೆ ರಾಜ್ಯದಲ್ಲಿ ಸಚಿವ ಸಂಪುಟದ ಪುನರ್ ರಚನೆಯ ವಿಚಾರಗಳು ಮುನ್ನೆಲೆಗೆ ಬಂದಿವೆ. ಅಲ್ಲದೇ ಕೆಲವರ ಖಾತೆ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಸಂಪುಟ ಪುನರ್ ರಚನೆ ಮಾಡಲು ಬಹುದು ಅಥವಾ ಮಾಡದೆಯೇ ಇರಬಹುದು ಎಂದಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರದ ಸಚಿವ ಸಂಪುಟ ಪುನರ್ ರಚಿಸಲೇಬೇಕೆಂದು ದೆಹಲಿಯಿಂದ ಲಿಸ್ಟ್ ಬಂದರೆ ಎಲ್ಲರೂ ಬದಲಾಗಬೇಕು, ಎಲ್ಲವೂ ಬದಲಾಗಬೇಕು. ಸಚಿವ ಸಂಪುಟ ಪುನರ್ ರಚನೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ನಿರ್ಧಾರ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಭಿ ಮಾಡಿಲ್ಲ. ಅಲ್ಲದೇ ನಮ್ಮ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ.





