Mysore
25
clear sky

Social Media

ಶನಿವಾರ, 21 ಮಾರ್ಚ್ 2026
Light
Dark

ರೀಲ್ಸ್‌ ತಂದ ಆಪತ್ತು: ಅಪಘಾತದಲ್ಲಿ ಬಾಲಕ ಸಾವು

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್’ ಮಾಡಲು ಹೋಗಿ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಮೀಶ್ ಸಂಗಳದ ರೀಲ್ಸ್ ಚಿತ್ರೀಕರಣ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೈಸೂರಿನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮೀಶ್, ಯುಗಾದಿ ಹಬ್ಬದ ರಜೆಗಾಗಿ ತನ್ನ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಹುಬ್ಬಳ್ಳಿಯ ಪ್ಲಾಟ್‌ವೊಂದರಲ್ಲಿ ರೀಲ್ಸ್ ಚಿತ್ರೀಕರಿಸಲು ತೆರಳಿದ್ದನು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತೆ ‘ಸ್ಟಂಟ್ ಮತ್ತು ಕ್ರಾಶ್’ ರೀತಿಯ ರೀಲ್ಸ್ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬರುವ ಕಾರು ಮತ್ತು ಬೈಕ್ ನಡುವೆ ಅಪಾಯಕಾರಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಯೋಜನೆ ರೂಪಿಸಿದ್ದರು.

ರೀಲ್ಸ್ ಚಿತ್ರೀಕರಣದ ವೇಳೆ ನಮೀಶ್ ಬೈಕ್ ಚಲಾಯಿಸುತ್ತಿದ್ದನು. ಎದುರಿನಿಂದ ಅತಿ ವೇಗವಾಗಿ ಬಂದ ಆಡಿ ಕಾರು ನೇರವಾಗಿ ನಮೀಶ್ ಚಲಾಯಿಸುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಮೀಶ್ ಸುಮಾರು 30 ಅಡಿ ದೂರಕ್ಕೆ ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ಹಾಗೂ ಸ್ನೇಹಿತರು ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರವಿನಗರದ ನಿವಾಸಿ ನಮೀಷ್ ಸಂಗಳದ ಮೃತಪಟ್ಟ ಬಾಲಕ. ಇಲ್ಲಿಯ ಶೇಜವಾಡ್ಕರ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಅಪ್ರಾಪ್ತರಿಗೆ ವಾಹನ ನೀಡಬೇಡಿ ಎಂದು ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಅವರ ಗಮನಕ್ಕೆ ಬರದೆ ಕೆಲವು ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ. ಈ ಕುರಿತು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

 

Tags:
error: Content is protected !!