ಬೆಂಗಳೂರು: ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪದೇ ಪದೇ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಅಕ್ರಮದ ಆರೋಪ ಮಾಡುತ್ತಲೇ ಬಂದಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ಆಯೋಗ ಕೂಡಾ ರಾಹುಲ್ ಆರೋಪವನ್ನು ತಳ್ಳಿಹಾಕಿ ಕಾನೂನು ಮಾರ್ಗದಲ್ಲೇ ಚುನಾವಣೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದರೂ ಆಕ್ಷೇಪ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಸೋಲುಗಳಿಗೆ ಚುನಾವಣಾ ಆಯೋಗವನ್ನು ದೂರುವುದು ಬಿಟ್ಟು ದೇಶ ವಿರೋಧಿ ಚಿಂತನೆಗಳನ್ನು, ಉಗ್ರರನ್ನು ಬೆಂಬಲಿಸುವ ನೀತಿಗಳನ್ನು, ಅತಿಯಾದ ಮುಸಲ್ಮಾನರ ಓಲೈಕೆ ನೀತಿಗಳನ್ನು, ಹಿಂದೂ ವಿರೋಧಿ ನೀತಿಗಳನ್ನು ಕಾಂಗ್ರೆಸ್ ಪಕ್ಷ ತ್ಯಜಿಸಲಿ ಎಂದು ಆಗ್ರಹಿಸಿದ್ದಾರೆ.
ನಿಜವಾಗಿಯೂ ಅಕ್ರಮ ನಡೆದಿರುವುದು ಕಾಂಗ್ರೆಸ್ ನಾಯಕತ್ವದಲ್ಲಿ. ನಕಲಿ ಗಾಂಧಿ ಕುಟುಂಬಕ್ಕೆ ಮಣೆ ಹಾಕಿದ್ದು, ಚುನಾವಣೆ ಎಂದರೇನು, ರಾಜಕೀಯ ಎಂದರೇನು ಎಂದರಿಯದ ಎಳಸುಗಳಿಗೆ ಕಾಂಗ್ರೆಸ್ ನಾಯಕತ್ವ ನೀಡಿದ್ದೇ ಚುನಾವಣಾ ಸೋಲುಗಳಿಗೆ ಕಾರಣ. ಈಗ ಹಿರಿಯ ನಾಯಕರೊಬ್ಬರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಬೆದರುಬೊಂಬೆಯಾಗಿ ನಿಲ್ಲಿಸಿದ್ದಾರೆ. ಅಧಿಕಾರ ಎಲ್ಲವೂ ಈಗಲೂ ನಕಲಿ ಗಾಂಧಿಗಳ ಕೈಯಲ್ಲಿದೆ. ಹೀಗಾಗಿಯೇ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





