Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಹೋಮ್‌ ಸ್ಟೇ ಮಾಲಕಿ ಮೇಲೆ ಅತ್ಯಾಚಾರ: ಪೊಲೀಸ್‌ ಸಬ್‌ ಡಿವಿಷನ್‌ ಸ್ಥಾಪನೆಗೆ ಜನಾರ್ಧನ ರೆಡ್ಡಿ ಒತ್ತಾಯ

ವಿಜಯನಗರ: ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಹಂಪಿ ಬಳಿ ಇರುವ ಹೋಮ್‌ಸ್ಟೇನ ಮಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸ್ಥಳದಲ್ಲಿ ಪೊಲೀಸ್‌ ಸಬ್‌ ಡಿವಿಷನ್‌ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಭಾರತದಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗಳು ಬರುವ ಪ್ರವಾಸಿ ಸ್ಥಳ ಹಂಪಿಯಾಗಿದೆ. ಈ ಸ್ಥಳದ ತುಸು ದೂರದಲ್ಲಿರುವ ಹೋಮ್ ಸ್ಟೇ ಮಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವಿಫಲತೆಯೇ ಕಾರಣ. ಇಲ್ಲಿ ಮಾಡಲಾಗಿದ್ದ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಿದ್ದರಿಂದ ಈ ಅವಘಡ ಸಂಭವಿಸಿದ್ದು, ಹಂಪಿಯಲ್ಲಿ ಕೂಡಲೇ ಪೊಲೀಸ್ ಸಬ್ ಡಿವಿಷನ್ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಗಂಗಾವತಿ ತಾಲ್ಲೂಕಿನ ಸಣಾಪುರದಲ್ಲಿ ಇಸ್ರೇಲಿ ಪ್ರವಾಸಿಗರೊಬ್ಬರು ಹೋಮ್‌ ಸ್ಟೇ ಮಾಲಕಿಯ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಘಟನೆ ಕುರಿತು ವರದಿ ಪಡೆದು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅದರಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಅಖಂಡ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅವರ ಸಹಕಾರದೊಂದಿಗೆ ಹಂಪಿಯಲ್ಲಿ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಡಿವೈಎಸ್ಪಿ ಮಟ್ಟದ ಅಧಿಕಾರಿಯನ್ನು ನೇಮಿಸಿ 32 ಪೊಲೀಸ್ ತಂಡಗಳನ್ನು ರಚಿಸಿ ಅವರಿಗೆ ದ್ವಿಚಕ್ರ ವಾಹನವನ್ನು ನೀಡಲಾಗಿತ್ತು. ಈ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನೆಗೊಂದಿ ಸಹ ಒಳಗೊಂಡಿರುವ ಕಾರಣ ಎರಡು ಐತಿಹಾಸಿಕ ಸ್ಥಳಗಳಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರ ರಕ್ಷಣೆಗೆ ಹಗಲಿರುಳು ಗಸ್ತು ತಿರುಗುವ ಉತ್ತಮ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಇದೀಗ ದುರಾದೃಷ್ಟಕರ ಸಂಗತಿ ಎಂದರೆ ನಂತರ ಬಂದ ಸರ್ಕಾರ ಆ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅತ್ಯಂತ ವಿನಮ್ರವಾಗಿ ವಿನಂತಿಸುತ್ತಾ, ಹಂಪಿ ಹಾಗೂ ಆನೆಗೊಂದಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರ ರಕ್ಷಣೆಗಾಗಿ ಈ ಹಿಂದೆ ಕಲ್ಪಿಸಲಾಗಿದ್ದ ಪೊಲೀಸ್ ಸಬ್ ಡಿವಿಷನ್ ಹಂಪಿಯಲ್ಲಿ ಪುನಃ ಸ್ಥಾಪಿಸಬೇಕು. ಜೊತೆಗೆ, ಆನೆಗೊಂದಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ನಿರ್ಮಿಸಿ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಭಾರತದಲ್ಲಿಯೇ ಅತಿ ಹೆಚ್ಚು ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುವ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣಗಳಾಗಿರುವ ಹಂಪಿ ಮತ್ತು ಆನೆಗೊಂದಿ ಭಾಗದ ಪ್ರತಿಯೊಬ್ಬರ ಸುರಕ್ಷತೆ ಕಾಪಾಡುವಲ್ಲಿ ಸರ್ಕಾರ ಬದ್ಧತೆ ತೋರಲಿ ಎಂಬುವುದು ನನ್ನ ಆಶಯವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

Tags:
error: Content is protected !!