ತಮಿಳುನಾಡು: ರೈತರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸಬೇಕು. ನಿರ್ಲಕ್ಷ್ಯ ಮಾಡಿದರೆ ರೈತ ಕುಲವೇ ನಾಶವಾಗುತ್ತದೆ ಎಂದು ಕರ್ನಾಟಕ ರಾಜ್ಯದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದರು.
ತಮಿಳುನಾಡಿನಲ್ಲಿ ನಡೆದ ರೈತರಿಗೆ ಚೈತನ್ಯ ತುಂಬಿದ ತಮಿಳುನಾಡು ವ್ಯವಸಾಯ ಸಂಘ ನೇತಾರ ದಿವಂಗತ ನಾರಾಯಣಸ್ವಾಮಿನಾಯ್ಡು ನೆನಪಿನಲ್ಲಿ ಬೃಹತ್ ರೈತ ನಮನ ರ್ಯಾಲಿ ಸಮಾವೇಶ ಉದ್ಘಾಟನೆ ಮಾತನಾಡಿದ ಅವರು, ದೇಶದ ರೈತರ ಹಿತಕ್ಕಾಗಿ ದೆಹಲಿಯ ಸುತ್ತ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದರು.
ರೈತರ ಹಾಗೂ ಕೃಷಿ ಕಾರ್ಮಿಕರ ಸಂಪೂರ್ಣ ಸಾಲಮನ್ನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಾಲ್ಕು ಸುತ್ತಿನ ಮಾತುಕತೆ ನಡೆಸಿ ಯಾವುದೇ ಕ್ರಮ ಜಾರಿ ಮಾಡಿಲ್ಲ. ಅದಕ್ಕಾಗಿ ಜುಲೈ 8ನೇ ತಾರೀಕು ದೇಶಾದ್ಯಂತ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಸಂಸದರಿಗೆ ಜ್ಞಾಪನಾ ಪತ್ರ ಸಲ್ಲಿಸಿ ಎಂದರು.
ಈ ಮೂಲಕ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸುವಂತೆ ಸಂಸದರಿಗೆ ಒತ್ತಾಯಿಸಲಾಗುವುದು. ಬಂಡವಾಳ ಶಾಹಿಗಳ ಮರ್ಜಿಗೆ ಸರ್ಕಾರಗಳು ಮಣಿಯುತ್ತಿದ್ದು ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಮಿಳುನಾಡು ವ್ಯವಸಾಯ ಸಂಘದ ಅಧ್ಯಕ್ಷ ರಾಮನಗೌಡರ್ ಮಾತನಾಡಿ, ದೇಶದಲ್ಲಿ ರೈತ ಪರ ಹೋರಾಟ ಮಾಡಿ ತಮ್ಮ ಪ್ರಾಣ ಕಳೆದುಕೊಂಡ ಸಾವಿರಾರು ರೈತರ ಆತ್ಮಕ್ಕೆ ಶಾಂತಿ ಕೊರಲು. ದಿವಂಗತ ನಾರಾಯಣಸ್ವಾಮಿ ನಾಯ್ಡು ರವರ ನೆನಪಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ತೆಲಂಗಾಣ ರಾಜ್ಯದ ಅರಿಸಿನ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ನರಸಿಂಹನಾಯ್ಡು ಮಾತನಾಡಿ, ಸರ್ಕಾರಗಳು ರೈತರ ಹೆಸರಿನಲ್ಲಿ ಆಡಳಿತ ನಡೆಸುತ್ತಾ ರೈತರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಆದ್ದರಿಂದ ರೈತರು ಜಾಗೃತವಾಗಿರಬೇಕು ಎಂದರು.
ಕೃಷ್ಣಗಿರಿಯ ಬಸ್ ನಿಲ್ದಾಣದಿಂದ ಸಮಾವೇಶದ ತನಕ ಬೃಹತ್ ರೈತರ ರಾಲಿ ನಡೆಸಲಾಯಿತು. ರ್ಯಾಲಿಯಲ್ಲಿ ಸಾವಿರಾರು ರೈತರು ಜಯಘೂಷ ಹಾಕುತ ಮೆರವಣಿಗೆಯಲ್ಲಿ ಸಾಗಿದರು. ತಮಿಳುನಾಡಿನ ವಿವಿಧ ಜಿಲ್ಲೆಗಳ ರೈತ ಮುಖಂಡರು ಹಾಗೂ ಕರ್ನಾಟಕದ ಹತ್ತಳ್ಳಿ ದೇವರಾಜ್, ಉಡಿಗಾಲ ರೇವಣ್ಣ, ಸುಂದ್ರಪ್ಪ ಭಾಗವಹಿಸಿದರು.