ಬೆಂಗಳೂರು: ಬಿಜೆಪಿ ಅವರು ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸಿದ ಹೋರಾಟಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯವರು, ಇಂದು ನಡೆದದ್ದು ಬಿಜೆಪಿಯವರ ಕುರ್ಚಿ ಕಾಳಗದ ಹೋರಾಟ ಎಂದು ಟ್ವೀಟ್ ಮೂಲಕ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯತೆಯೂ ಇಲ್ಲದ, ರಾಷ್ಟ್ರೀಯತೆಯೂ ಇಲ್ಲದ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಕಳೆದ ಹತ್ತು ವರ್ಷಗಳಿಂದ ಈ ದೇಶದ ಅತೀ ದೊಡ್ಡ ಕಾಮಿಡಿ ಸಿನಿಮಾ ಆಗಿದೆ. ಈ ಸೂಪರ್ ಹಿಟ್ ಕಾಮಿಡಿ ಸಿನಿಮಾದ ಸ್ಟಾರ್ ಕಾಮಿಡಿಯನ್ ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಪಾಪ ನಿಮ್ಮ ತಂದೆಯವರು ಈ ಇಳಿ ವಯಸ್ಸಿನಲ್ಲೂ ಆ ಕಾಮಿಡಿ ಪೀಸ್‌ನ ಮಾನ ಉಳಿಸಲು ರಾಜ್ಯದಲ್ಲಿ ಸಿಗಬಹುದಾದ ಅಧಿಕಾರವನ್ನು ತ್ಯಾಗ ಮಾಡಿ ಅಲ್ಲಿ ಆ ಕಾಮಿಡಿ ಪೀಸ್‌ಗೆ ರಕ್ಷಣೆ ಕೊಡುತ್ತಿದ್ದಾರಲ್ಲ, ಈ ಶತಮಾನದ ನಿಜವಾದ ಕಟ್ಟಪ್ಪ ಅಂದರೆ ಅದು ನಿಮ್ಮ ತಂದೆಯವರೇ ಎಂದು ವ್ಯಂಗ್ಯವಾಡಿದ್ದಾರೆ.
ಅಂದಹಾಗೆ ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ 35 ಶಾಸಕರು ಸಭೆ ಸೇರಿದ್ದರಂತಲ್ಲ, ಅಲ್ಲಿ ತಾವು ಇದ್ದರೋ? ಅಥವಾ ಆತ್ಮಹತ್ಯೆಗೆ ಕಾರಣವಾದರೂ ಸರಿ, ಕೊಲೆ ಮಾಡಿದರೂ ಸರಿ, ಎಐಸಿಸಿ ಅಧ್ಯಕ್ಷರ ಕೋಟಾದಲ್ಲಿ ತಮ್ಮ ಕುರ್ಚಿ ಮಾತ್ರ ಸುಭದ್ರ ಎಂದು ಯಾವ ಬಣಕ್ಕೂ ಸೇರದೆ ತಟಸ್ಥರಾಗಿರುವ ನಿರ್ಧಾರ ಮಾಡಿದ್ದೀರೋ? ಎಂದು ಪ್ರಶ್ನಿಸಿದ್ದಾರೆ.