ಬೆಂಗಳೂರು: ಬಿಜೆಪಿಗೆ ನೀಲಿ ಶಾಲು ಧರಿಸುವುದು ಈಗ ಹೊಸ ಫ್ಯಾಷನ್ ಎಂಬ ಹೇಳಿಕೆ ನೀಡಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದು, ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಾವು ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರ ರೀತಿ ಎಲೆಕ್ಷನ್ ಹಿಂದೂಗಳು ಅಲ್ಲ, ಎಲೆಕ್ಷನ್ ಅಂಬೇಡ್ಕರ್ ವಾದಿಗಳೂ ಅಲ್ಲ. ಅಲ್ಲದೇ ತಾವು ಹೇಳಿಕೊಳ್ಳುವಂತೆ ತಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಅಂಬೇಡ್ಕರ್ ವಾದಿಗಳಾಗಿದ್ದಾರೆ ನೆಹರು ಅವರಾಗಲಿ, ಇಂದಿರಾ ಗಾಂಧಿ ಅವರಾಗಲಿ ಅಥವಾ ರಾಜೀವ್ ಗಾಂಧಿ ಅವರಾಗಲಿ ನೀಲಿ ಶಾಲು ಧರಿಸಿದ್ದ ಒಂದೇ ಒಂದು ಫೋಟೋ ತೋರಿಸಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.
ಪಾಪ ನಿಮ್ಮ ನಕಲಿ ಗಾಂಧಿ ಪಕ್ಷದ ಥರ್ಡ್ ಟೈಂ ಫೇಲ್ ಸ್ಟಾರ್ ಕಾಮಿಡಿಯನ್ ಚುನಾವಣೆ ಬಂದಾಗಲೆಲ್ಲಾ ಕೇಸರಿ ಬಟ್ಟೆ, ಕೇಸರಿ ಶಾಲು, ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಅದು ಹೋಗಲಿ ಬಿಡಿ, ತಾನು ಕೌಲ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಮುತ್ತಜ್ಜ ನೆಹರೂ ಅವರಾಗಲಿ, ಅಜ್ಜಿ ಇಂದಿರಾ ಗಾಂಧಿ ಅವರಾಗಲಿ, ಅಪ್ಪ ರಾಜೀವ್ ಗಾಂಧಿ ಅವರಾಗಲಿ ಹಾಗೂ ಅಮ್ಮ ಸೋನಿಯಾ ಗಾಂಧಿ ಅವರಾಗಲಿ ಒಂದು ದಿನವೂ ಕೇಸರಿ, ಕುಂಕುಮ, ಗುಡಿ ಗೋಪುರಗಳ ಹತ್ತಿರವೂ ಸುಳಿದಿದ್ದನ್ನು ನಾನಂತೂ ಕಂಡಿಲ್ಲ. ನೀವೇನಾದರೂ ಕಂಡಿದ್ದರೆ ಒಂದು ಫೋಟೋ ತೋರಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.
ಇನ್ನು ಅಂಬೇಡ್ಕರ್ ಅವರನ್ನ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಹೇಗೆ ನಡೆಸಿಕೊಂಡಿತು ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲವೂ ಶಾಶ್ವತವಾಗಿ ದಾಖಲಾಗಿದೆ. ಕಂಟ್ರಾಕ್ಟರ್‌ಗಳ ಆತ್ಮಹತ್ಯೆ, ಡಿನ್ನರ್ ಮೀಟಿಂಗ್ ಇವೆಲ್ಲಾ ಗೊಜಲುಗಳಿಂದ ಬಿಡುವಿದ್ದಾಗ ಒಮ್ಮೆ ಆ ಚರ್ಚ್‌ಗಳನ್ನು ಓದಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಭಾಷಣಗಳಲ್ಲಿ ಮೀಸಲಾತಿ ಪರವಾಗಿ ಮೊಸಳೆ ಕಣ್ಣೀರು ಸುರಿಸುವುದು, ವಿದೇಶಿ ವೇದಿಕೆಗಳಲ್ಲಿ ಮೀಸಲಾತಿ ವಿರುದ್ಧವಾಗಿ ಮಾತನಾಡುವ ಡೋಂಗಿ ಅಂಬೇಡ್ಕರ್ ವಾದ ಅಲ್ಲ ನಮ್ಮದು. ಬಾಬಾ ಸಾಹೇಬ್ ಅಂಬೇಡ್ಕರರ ಸಿದ್ಧಾಂತಕ್ಕೆ ಸಮನಾದ ಸಿದ್ಧಾಂತ ಯಾವುದಾದರೂ ಇದ್ದರೆ ಅದು ಬಿಜೆಪಿಯ ಏಕಾತ್ಮ ಮಾನವತಾವಾದ ಮತ್ತು ಅಂತ್ಯೋದಯ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ವಿಸರ್ಜನೆ ಮಾಡಬೇಕು ಅಂದ ಮೇಲೂ ಅಧಿಕಾರಕ್ಕಾಗಿ ಒಂದು ಕುಟುಂಬದ ಆಸ್ತಿಯಾಗಿ ಉಳಿದುಕೊಂಡಿರುವ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದ ಏಕೈಕ ಸಿದ್ಧಾಂತ ಅಂದರೆ ಅದು ಅಧಿಕಾರವಾದ. ಅಧಿಕಾರಕ್ಕಾಗಿ ಲಜ್ಜೆ ಇಲ್ಲದ ಅವಕಾಶವಾದ. ಮಿಕ್ಕಿದ್ದೆಲ್ಲ ಬರೀ ಬೊಗಳೆ ಎಂದು ಆರೋಪಿಸಿದ್ದಾರೆ.