ಬೆಂಗಳೂರು: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮವೆಂದರೆ , ಭಾರತೀಯ ಸಂಸ್ಕೃತಿ, ಪರಂಪರೆ ಎಂದರೆ ಯಾಕಿಷ್ಟು ದ್ವೇಷ, ಅಸಡ್ಡೆ? ಎಂದು ಪ್ರಶ್ನಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ, 144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದ ಈ ಪರಮ ಪವಿತ್ರ ಪರ್ವಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಒಮ್ಮೆ ಮಿಂದರೆ ಪಾಪಗಳೆಲ್ಲವೂ ಕಳೆಯುತ್ತದೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆಯಾಗಿದೆ. ಅಲ್ಲದೇ ಭಾರತೀಯತೆ, ಸನಾತನ ಧರ್ಮದ ಬಗ್ಗೆ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ನಕಲಿ ಗಾಂಧಿ ಕುಟುಂಬವನ್ನ ಓಲೈಸುವ ಭರದಲ್ಲಿ, ಶತಕೋಟಿ ಹಿಂದೂಗಳ ನಂಬಿಕೆಯನ್ನು ಯಾಕೆ ಅಪಮಾನಿಸುತ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.
ಹಜ್ ಯಾತ್ರೆ ಬಗ್ಗೆಯೋ, ರಂಜಾನ್ ಉಪವಾಸದ ಬಗ್ಗೆಯೋ ಈ ರೀತಿ ಟೀಕೆ ಮಾಡುವ ಧೈರ್ಯ ತೋರಿ ನೋಡೋಣ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಲ್ಲರಿಗೂ ತಮ್ಮ ತಮ್ಮ ಮತ, ಧರ್ಮ, ನಂಬಿಕೆಗಳನ್ನು ಆಚರಣೆ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯವಿದೆ ಎಂದಿದ್ದಾರೆ. ಹೀಗಿರುವಾಗ ಗಂಗೆಯಲ್ಲಿ ಮಿಂದೇಳುವ ಆಚರಣೆಯನ್ನು ಪ್ರಶ್ನೆ ಮಾಡೋದು, ಹಿಂದೂ ಧರ್ಮಕ್ಕೆ ಮಾತ್ರವಲ್ಲ ಅದು ಸಂವಿಧಾನಕ್ಕೂ ಅಪಚಾರ ಮಾಡಿದಂತೆ ಎಂದು ಹೇಳಿದ್ದಾರೆ.