Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಕಾವೇರಿ ತುಲಾಸಂಕ್ರಮಣ ಜಾತ್ರೆ ಯಶಸ್ವಿಯಾಗಿ ಜರುಗಲು ಅಗತ್ಯ ಸೌಕರ್ಯಗಳನ್ನ ಕಲ್ಪಿಸಿ: ಸಚಿವ ಭೋಸರಾಜು ಸೂಚನೆ

  • ಅಕ್ಟೋಬರ್‌ 17 ಗುರುವಾರ ಬೆಳಿಗ್ಗೆ 7.40 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ತೀರ್ಥೋದ್ಬವ
  • ಭಾಗಮಂಡಲದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ
  • ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚನೆ

ಭಾಗಮಂಡಲ : ಅಕ್ಟೋಬರ್‌ 17 ರಂದು ಬೆಳಿಗ್ಗೆ 7.40 ಸಲ್ಲುವ ತುಲಾ ಲಗ್ನದಲ್ಲಿ ಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಬವ ನಡೆಯಲಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌ ಎಸ್‌ ಭೋಸರಾಜು ಸೂಚನೆ ನೀಡಿದರು.

ಹಿಂದಿನ ವರ್ಷ ಯಶಸ್ವಿಯಾಗಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ರಾತ್ರಿ ನಡೆದ ತೀರ್ಥೋದ್ಭವದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಕ್ತಾದಿಗಳು ಭಾಗಿಯಾಗಿದ್ದರು. ಈ ಬಾರಿ ಬೆಳಿಗ್ಗೆ ತೀರ್ಥೋದ್ಭವ ನಡೆಯಲಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನ ಭಕ್ತಾದಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಜಾತ್ರೆ ಯಶಸ್ವಿಯಾಗಿ ನಡೆಯಲು ಅಗತ್ಯ ಪೊಲೀಸ್‌ ಭದ್ರತೆಯನ್ನು ಒದಗಿಸಿ, ಸರಳವಾಗಿ ಎಲ್ಲರಿಗೂ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದರು.

ಕಳೆದ ಬಾರಿ ಕಲ್ಪಿಸಿದ್ದ ರೀತಿಯಲ್ಲಿಯೇ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್ ಗಳ ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಮಡಿಕೇರಿ ರಸ್ತೆಯಿಂದ ತಲಕಾವೇರಿಯವರೆಗೆ ರಸ್ತೆ ಉದ್ದಕ್ಕೂ ಎರಡು ಬದಿಗಳ್ಲಲಿ ಬೆಳೆದು ನಿಂತಿರುವ ಕಾಡುಗಳನ್ನು ಕಡಿದು, ಸುಗಮ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಸುಗುಮಗೊಳಿಸಬೇಕು. ವನ್ಯಜೀವಿಗಳಿಂದ ಹಾನಿಯಾಗದೇ ಇರುವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕ್ಷೇತ್ರದಲ್ಲಿ ಸ್ವಚ್ಚತೆ, ಸಮರ್ಪಕ ವಿದ್ಯುತ್‌ ವ್ಯವಸ್ಥೆ, ರಸ್ತೆಗಳನ್ನು ಸುಸ್ಥತಿಯಲ್ಲಿಡುವುದು, ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಅಗತ್ಯ ತಯಾರಿ, ಶೌಚಾಲಯದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಿಂಗಳ ಅಂತ್ಯದೊಳಗೆ ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಪೊನ್ನಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟ್‌ ರಾಜಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags: