ಬೆಂಗಳೂರು: ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಹಾಗೂ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.
ಈ ನಡುವೆ ಗುರುವಾರ ಗೈರಾದರೆ ‘ನೋ ವರ್ಕ್ ನೋ ಪೇ’ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ಮತ್ತೊಂದೆಡೆ ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದೇ ಇದ್ದರೆ, ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಸ್ ಸಂಚಾರದ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ. ಆದರೆ ಕೆಎಸ್‍ಆರ್‍ಟಿಸಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಡಿಪೋಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವ ಯೋಜನೆ ಹಾಕಿದೆ. ಅಗತ್ಯವಿದ್ದರೆ ಇತರ ಡಿವಿಷನ್‍ಗಳಿಂದ ಬಸ್‍ಗಳನ್ನು ತರಲು ಸಿದ್ಧತೆ ನಡೆಸಲಾಗಿದೆ.
ನೌಕರರು ತಮ್ಮ ಬೇಡಿಕೆಗಳನ್ನು ಮಂಡಿಸುವ ಹಕ್ಕು ಹೊಂದಿದ್ದರೂ, ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವ ರೀತಿಯಲ್ಲಿ ಮುಷ್ಕರ ಅಥವಾ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಕೆಎಸ್‌ಆರ್‌ಟಿಸಿ ನಿಲುವು ಸ್ಪಷ್ಟಪಡಿಸಿದೆ. ನಾಳೆ ಸಾಮಾನ್ಯವಾಗಿ ಸಂಚರಿಸುವ ಪ್ರಯಾಣಿಕರು ಯಾವುದೇ ತೊಂದರೆ ಎದುರಿಸದಂತೆ ನೋಡಿಕೊಳ್ಳುವುದು ಸಾರಿಗೆ ಇಲಾಖೆಯ ಜವಾಬ್ದಾರಿ ಎಂದು ಎಂಡಿ ಒತ್ತಿ ಹೇಳಿದ್ದಾರೆ.





