ಬೆಂಗಳೂರು : ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿರುವ ಬಾಬೂಜಿಯವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಇದೇ ವೇಳೆ ಪಿಟಿಸಿಎಲ್ ಕಾಯ್ದೆ ಸಮರ್ಪಕವಾಗಿ ಜಾರಿ ಆಗ್ತಿಲ್ಲ. ಪರಭಾರೆ ಭೂಮಿಯನ್ನ ವಾಪಸ್ ಕೊಡಿ ಎಂದು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಏರು ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಸ್ಥಳದಿಂದ ಹೊರಟರು. ಬಳಿಕ ಸ್ಥಳದಲ್ಲಿದ್ದ ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಕೆಎಚ್ ಮುನಿಯಪ್ಪಗೆ ದಲಿತ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಸಚಿವರು ಅಲ್ಲಿಂದ ತೆರಳಲು ಅವಕಾಶ ಮಾಡಿಕೊಟ್ಟರು.
ಈ ವೇಳೆ ಕೆಲಕಾಲ ತಳ್ಳಾಟ, ನೂಕಾಟ ಹಾಗೂ ಸ್ಥಳದಲ್ಲಿ ವಾಗ್ವಾದ ಕೂಡ ನಡೆಯಿತು. ಬಳಿಕ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದರು.