ಬೆಂಗಳೂರು : ಅತ್ಯಾಚಾರ ಪ್ರಕರಣ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ದೋಷಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೋರ್ಟ್ ಹಾಲ್ ನಲ್ಲಿ ಕಣ್ಣೀರು ಹಾಕುತ್ತಾ ಬೇಡಿಕೊಂಡ ಘಟನೆ ನಡೆಯಿತು.
ವಿಚಾರಣೆ ವೇಳೆ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ಅವರನ್ನು ಕೆಲ ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಲೇ ಪ್ರಜ್ವಲ್ ರೇವಣ್ಣ ಉತ್ತರಿಸಿದರು. ‘ನಾನು ಹಲವು ಮಹಿಳೆಯರೊಂದಿಗೆ ಇಂತಹ ಕೃತ್ಯ ನಡೆಸಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಸಂಸದನಾಗಿದ್ದ ವೇಳೆ ಯಾರೂ ಇಂತಹ ಆರೋಪ ಮಾಡಿರಲಿಲ್ಲ. ನಾನು ರೇಪ್ ಮಾಡಿದ್ದರೆ ಅವರು ಯಾರಿಗೂ ಏಕೆ ಹೇಳಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಅವರು ಯಾಕೆ ಹಾಗೆ ಮಾಡಿದ್ದಾರೆ? ಪೊಲೀಸರೇ ಈ ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ಈ ರೀತಿ ಮಾಡಿದ್ದಾರೆ. ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ” ಎಂದರು.
ಆರಂಭದಲ್ಲಿ ಇಂಗ್ಲಿಷ್‌ನಲ್ಲಿಯೇ ಮಾತು ಆರಂಭಿಸಿದ ಪ್ರಜ್ವಲ್ ರೇವಣ್ಣ, ನಂತರ ಕಣ್ಣೀರಿಡುತ್ತಾ ಕನ್ನಡದಲ್ಲಿ ಮಾತು ಮುಂದುವರಿಸಿದರು. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ. ಬೇಕಿದ್ದರೆ ನನ್ನ ಹಿನ್ನಲೆ ನೋಡಿ.. ಕಳೆದ ೬ ತಿಂಗಳುಗಳಿಂದ ತಂದೆ ತಾಯಿಯನ್ನು ನೋಡಿಲ್ಲ. ದಯಮಾಡಿ ನನಗೆ ಕನಿಷ್ಠ ಶಿಕ್ಷೆ ಕೊಡಿ ಎಂದು ಗದ್ಘತಿತರಾದರು.
ಅಂತಿಮವಾಗಿ ಕೋರ್ಟ್ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಒಟ್ಟು 11.35 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ. ಐಪಿಸಿ ಸೆಕ್ಷನ್ 376(2)(ಕ) ಅಡಿ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ದಂಡದ ಹಣದಲ್ಲಿ ಸಂತ್ರಸ್ತೆಗೆ 11 ಲಕ್ಷ ರೂ ನೀಡಬೇಕು ಎಂದು ಆದೇಶಿಸಿದ್ದಾರೆ. ಇಂದಿನಿಂದಲೇ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆರಂಭವಾಗಲಿದೆ.
‘ಅತ್ಯಾಚಾರ ಸಂತ್ರಸ್ತೆಯ ದಿಟ್ಟ ನಡೆ’
ಅತ್ಯಾಚಾರ ಸಂತ್ರಸ್ತೆಯ ದಿಟ್ಟ ನಡೆಯೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಆರೋಪ ಸಾಬೀತಾಗಲು ಪ್ರಮುಖ ಕಾರಣ ಎಂದು ಪ್ರಕರಣದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅತ್ಯಾಚಾರ ಆರೋಪವಾದ ಕಾರಣ ಪ್ರಕರಣವನ್ನು ಸೂಕ್ಷ ವಾಗಿ ನಿರ್ವಹಿಸಬೇಕಿತ್ತು. ತಂಡವು ಆರೋಪಿಯನ್ನು ಹುಡುಕುವ ವೇಳೆಗಾಗಲೇ ಆತನೇ ನಮ್ಮ ಬಲೆಗೆ ಬಿದ್ದ. ಅಲ್ಲಿಂದ ಪ್ರಕರಣ ತಿರುವು ಪಡೆದುಕೊಂಡಿತು. ಸತತವಾಗಿ ಏಳು ತಿಂಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ೧೮೦ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆವು ಎಂದು ತಿಳಿಸಿದರು.
‘ತನಿಖೆಯ ವೇಳೆ ಸಂತ್ರಸ್ತೆಯು ಉತ್ತಮವಾಗಿ ಸಹಕರಿಸಿದ್ದಾರೆ. ಆಕೆ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ಕೇಳಲಾಗಿತ್ತು. ಪ್ರಕರಣದ ತನಿಖೆ ಮುಗಿಯುವವರೆಗೂ ಆಕೆ ತೋರಿದ ದಿಟ್ಟತನ ಮಾದರಿ’ ಎಂದರು.
ಪ್ರಕರಣದ ತನಿಖೆಗಾಗಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಪಿಗಳಾಗಿದ್ದ ಸೀಮಾ ಲಾಟ್ಕರ್ ಹಾಗೂ ಸುಮನ್ ಅವರು ಎಸ್‌ಐಟಿ ತಂಡ ಮುನ್ನಡೆಸಿದ್ದರು. ಅವರೊಂದಿಗೆ ೨೬ ಅಧಿಕಾರಿಗಳು ಇದ್ದರು.





