ಬೆಂಗಳೂರು: ಮುಡಾ ಹಗರಣವನ್ನು ಇ.ಡಿ.ಅಧಿಕಾರಿಗಳು ತನಿಖೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಜನವರಿ.28) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುವ ವೇಳೆಯೇ ಇ.ಡಿ.ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ಕೈಗೆತ್ತುಕೊಂಡು ತನಿಖೆ ನಡೆಸಿದೆ. ಹಾಗಾಗಿ ಈ ತನಿಖೆಯೂ ಕಾನೂನು ಬಾಹಿರವಾಗಿದೆ. ಹೀಗಿದ್ದರೂ ಇ.ಡಿ.ಸಂಸ್ಥೆಯೂ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ನೋಟಿಸ್ ನೀಡಿದೆ. ಆದರೆ ಇದು ಸರಿಯಲ್ಲ, ಒಟ್ಟಿನಲ್ಲಿ ಇ.ಡಿ. ನೋಟಿಸ್ ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇ.ಡಿ.ಸಂಸ್ಥೆಯೂ ಈ ಹಿಂದೆ ಮುಡಾ ಮಾಜಿ ಆಯುಕ್ತ ಟಿ.ಬಿ.ನಟೇಶ್ ಅವರಿಗೂ ನೋಟಿಸ್ ಜಾರಿ ಮಾಡಿತ್ತು. ಆದರೆ ನಟೇಶ್ ಅವರು ತಮ್ಮ ವಿರುದ್ಧದ ಇ.ಡಿ.ಸಮನ್ಸ್ ಅನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೇಟ್ಟಿಲೇರಿದ್ದರು. ನಟೇಶ್ ಅವರು ಸಲ್ಲಿಸಿದ್ದ ಅರ್ಜಿ ಅನ್ವಯ ಹೈಕೋರ್ಟ್ ನಿನ್ನೆ(ಜನವರಿ.27) ವಿಚಾರಣೆ ನಡೆಸಿ, ಸಮನ್ಸ್ ಅನ್ನು ರದ್ದುಗೊಳಿಸಿದೆ ಎಂದರು.
ಇನ್ನೂ ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್‌ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಿದ್ದರು. ಈ ಹಿಂದೆ ಇ.ಡಿ. ನೀಡಿದ್ದ ಮೊದಲ ನೋಟಿಸ್‌ಗೆ ಪಾರ್ವತಿ ಸಿದ್ದರಾಮಯ್ಯ ಅವರು ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದರು. ಆದರೆ ಈ ಮಧ್ಯೆಯೇ ಇ.ಡಿ. ಎರಡನೇ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಇ.ಡಿ. ಅಧಿಕಾರಿಗಳು ಪಾರ್ವತಿ ಸಿದ್ದರಾಮಯ್ಯ ಅವರ ಕುಟುಂಬದ ಎಲ್ಲಾ ಮಾಹಿತಿ ಕೇಳುತ್ತಿದ್ದಾರೆ. ಹೀಗಾಗಿ ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಹೈಕೋರ್ಟ್ ಫೆಬ್ರವರಿ.10ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿ, ಇ.ಡಿ. ನೋಟಿಸ್‌ಗೆ ತಡೆ ನೀಡಿದೆ ಎಂದು ಹೇಳಿದರು.