ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಸೂರ್ಯನ ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸೂರ್ಯನ ಶಾಖ ಹೆಚ್ಚಾಗಿದ್ದು, ದಾಹ ತಣಿಸಿ ಕೊಳ್ಳಲು ಜನರು ತಂಪು ಪಾನಿಯಗಳತ್ತ ಮುಖ ಮಾಡಿದ್ದಾರೆ. ನೈಸರ್ಗಿಕ ಪಾನೀಯ ಎಳನೀರಿನ ಬೆಲೆ 60 ರೂ ತಲುಪಿದೆ. ಶಿವರಾತ್ರಿ ಕಳೆಯುತ್ತಿದ್ದಂತೆ ಬಿಸಿಲಿನ ತಾಪ ಏರುತ್ತಿದ್ದು, ಜನರು ಪ್ರಾರಂಭದ ಬಿಸಿಲಿಗೆ ಬಸವಳಿಯುತ್ತಿದ್ದಾರೆ. ಇನ್ನೂ ಎರಡು ತಿಂಗಳು ಬಿಸಿಲು ಇರಲಿದ್ದು ದಿನ ಕಳೆಯುವುದು ಹೇಗೆ ಎಂದು ಜನತೆ ಚಿಂತೆಗೀಡಾಗಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಜನರು ದಾಹ ತಣಿಸಿಕೊಳ್ಳಲು ತಂಪು ಪಾನೀಯಗಳತ್ತ ಮುಖ ಮಾಡಿದ್ದು ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಬಿಸಿಲಿನಂತೆ ಬೆಲೆಯೂ ಸಹ ಅಷ್ಟೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ 30 ರೂಗೆ ಸಿಗುತ್ತಿದ್ದ ಎಳನೀರು ಈಗ ಬರೋಬ್ಬರಿ 60 ರೂ ತಲುಪಿದೆ. ಮಂಡ್ಯ, ಮದ್ದೂರು, ತುಮಕೂರು, ರಾಮನಗರ, ಮಾಗಡಿ ಸೇರಿದಂತೆ ಮತ್ತಿತರ ಕಡೆಯಿಂದ ಎಳನೀರು ಬರುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ.
ಇತ್ತೀಚೆಗೆ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದ್ದು, ಕೃತಕ ಪಾನೀಯಗಳಿಗಿಂತ ರಾಸಾಯನಿಕ ಮುಕ್ತ ಹಾಗೂ ಯಾವುದೇ ಕಲಬೆರಿಕೆ ಮಾಡಲು ಸಾಧ್ಯವಾಗದ ಉತ್ತಮ ಔಷಧಿ ಗುಣಗಳನ್ನು ಹೊಂದಿರುವ ದೇಹವನ್ನು ತಂಪಾಗಿರಿಸುವ ನೈಸರ್ಗಿಕ ಪಾನೀಯವಾದ ಎಳನೀರು ಸೇವನೆ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಎಳನೀರು 30 ರೂ.ಗೆ ಸಿಕ್ಕರೂ ಸಹ ಸಾಗಾಟ, ಕೊಯ್ದು ಮಾಡುವುದು, ಕೂಲಿ ಎಲ್ಲಾ ಸೇರಿ ಬೆಂಗಳೂರಿಗೆ ಬರುವಷ್ಟರಲ್ಲಿ 60 ರೂ ಆಗುತ್ತಿದ್ದು ಇದರಲ್ಲಿ ರೈತರಿಗೆ ಸಿಗುವ ಲಾಭ ಅಷ್ಟಕ್ಕಷ್ಟೆ. ಇಲ್ಲಿ ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಇನ್ನು ಮೇ ಅಂತ್ಯದವರೆಗೂ ರಾಜ್ಯದಲ್ಲಿ ಗರಿಷ್ಟ ಹಾಗೂ ಕನಿಷ್ಟ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಜನರು ಆರೋಗ್ಯದತ್ತ ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದೆ.