ಬೆಂಗಳೂರು: ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಆದೇಶ ಮಾಡಿದ್ದಾರೆ. ಆದಷ್ಟು ಬೇಗ ಸುಗ್ರೀವಾಜ್ಞೆ ಜಾರಿಯಾಗುತ್ತದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮ ತೆಗೆದುಕೊಂಡ ಬಳಿಕ ಅವರು ಬರುತ್ತಾರೆ. ತದನಂತರ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸುತ್ತೇವೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಎಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಡವರನ್ನು ರಕ್ಷಣೆ ಮಾಡುವುದು ನಮ್ಮ ಗುರಿ. ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಎಸ್ಪಿಗಳೊಂದಿಗೆ ಸಭೆ ಮಾಡುತ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತದೆ ಎಂದು ಹೇಳಿದರು.