Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬಡವರಿಗೆ ಬಿಪಿಎಲ್‌ ಕಾರ್ಡ್‌ ತಲುಪಿಸುವುದು ನಮ್ಮ ಆದ್ಯತೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಬಿಪಿಎಲ್ ಕಾರ್ಡ್ ತಲುಪಿಸುವುದು ನಮ್ಮ ಆದ್ಯತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ನೀಡಿಲ್ಲ ಎಂದು ಹೇಳಿದರು.

ಅನ್ನಭಾಗ್ಯ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017ರಲ್ಲಿ 1 ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿಯವರು ಮಾಡಿಲ್ಲ, ಮಾಡೋದು ಇಲ್ಲ ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥಾ ಯೋಜನೆಯನ್ನು ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿ ಮಾಡಿದ್ದಾರೆ? ಹೇಳಿ ಎಂದು ಪ್ರಶ್ನಿಸಿದರು.

ನಾವು ರಾಜ್ಯದಿಂದ ಕೇಂದ್ರಕ್ಕೆ ₹4.50 ಲಕ್ಷ ಕೋಟಿ ತೆರಿಗೆಯನ್ನು ಕಟ್ಟುತ್ತೇವೆ. ನಮಗೆ ವಾಪಸ್ಸು ಬರುವುದು ₹59 ಸಾವಿರ ಕೋಟಿ ಮಾತ್ರ. ಉಳಿದ ದುಡ್ಡು ಕೇಂದ್ರದಲ್ಲಿಯೇ ಇರುತ್ತದೆ. ಅದನ್ನು ರಾಜ್ಯಕ್ಕೆ ಕೊಡಿಸಲಿ. ಬರೀ ಮಾತನಾಡಿದರೆ ಪ್ರಯೋಜನವೇನು? ಹೆಚ್.ಡಿ.ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಮಾತನಾಡಿದ್ದರೆಯೇ? ಎಂದು ಕೇಳಿದರು.

ನಬಾರ್ಡ್ ವತಿಯಿಂದ ಕಳೆದ ವರ್ಷ ₹5,600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಗಿತ್ತು. ಈ ವರ್ಷ ₹2,340 ಕೋಟಿ ನೀಡಿದ್ದಾರೆ ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣವನ್ನು 58% ರಷ್ಟು ಕಡಿಮೆ ಮಾಡಿದ್ದಾರೆ. ಕುಮಾರಸ್ವಾಮಿ, ಪ್ರಹ್ಲಾದ ಜೋಷಿಯವರುಗಳು ಕರ್ನಾಟಕದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ? ರೈತರಿಗೆ ಅನ್ಯಾಯ ಮಾಡಬೇಡಿ, ಇದು ದ್ರೋಹದ ಕೆಲಸ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ನಾನು ಅಧಿಕಾರಕ್ಕೆ ಬಂದ ನಂತರ 5 ಲಕ್ಷದವರೆಗೆ ಬಡ್ಡಿರಹಿತ ಸಾಲ. 15 ಲಕ್ಷದವರೆಗೆ ಶೇಕಡಾ 3% ದರದಲ್ಲಿ ಸಾಲ ನೀಡಲಾಗಿದೆ. ನಬಾರ್ಡ್ ಹಣಕಾಸಿನ ಮಂತ್ರಿಗಳ ಕೆಳಗೆ ಬರುತ್ತದೆ. ನಿರ್ಮಲಾ ಸೀತಾರಾಮನ್ ಏನು ಮಾಡುತ್ತಿದ್ದಾರೆ? 2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಈ ಬಗ್ಗೆ ಏನು ಕೇಳಿದ್ದಾರೆ? 15ನೇ ಹಣಕಾಸು ಆಯೋಗದಡಿ ₹11,595 ಕೋಟಿ ಘೋಷಣೆ ಮಾಡಿದ್ದರು. ಎಲ್ಲಿ ಕೊಟ್ಟರು? ಇದನ್ನು ನೀವು ಕೇಳುವುದಿಲ್ಲ. ₹56,000 ಕೋಟಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಗಳಲ್ಲಿ ಏಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಜನರನ್ನು ದಾರಿತಪ್ಪಿಸಿ ಮತಗಳಿಸಲು ಮಹಾರಾಷ್ಟ್ರ ಸರ್ಕಾರ ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಜಾಹೀರಾತು ನೀಡಿದೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದರು.

Tags:
error: Content is protected !!