ಬೆಳಗಾವಿ: ಆನ್‌ಲೈನ್ ಗೇಮಿಂಗ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಮಾನದ ಬಳಿಕ ರಾಜ್ಯ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಇಂದು(ಡಿಸೆಂಬರ್.15)ಆನ್‌ಲೈನ್ ಗೇಮಿಂಗ್ ಕುರಿತು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆನ್‌ಲೈನ್ ಗೇಮ್‌ಗಳನ್ನು ನಿರ್ಬಂಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಆದೇಶ ಹೊರಡಿಸಲಾಗಿದ್ದು, ಗೇಮಿಂಗ್ ಪ್ರವರ್ತಕರು ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಗೃಹ ಇಲಾಖೆಯ ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ಆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಕೋರ್ಟ್ ತೀರ್ಮಾನದ ನಂತರ ಆನ್‌ಲೈನ್ ಗೇಮಿಂಗ್ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಅನೇಕ ಗೇಮಿಂಗ್ ಆಪ್‌ಗಳು ಪರವಾನಗಿ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದು, ಹೈಕೋರ್ಟ್ ಆದೇಶದ ಕಾರಣದಿಂದ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಬಲಿಯಾಗಿ ಹಣ ಕಳೆದುಕೊಂಡು ಐವರು ಬೆಂಗಳೂರಿನಲ್ಲಿ ಹಾಗೂ ವಿಜಯನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಆರ್.ಅಶೋಕ್ ಮಾತನಾಡಿ, ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಕೋಟ್ಯಾಧೀಶ್ವರಾಗಿದ್ದವರು ಹಣ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಜೊತೆಗ ಮನೆಗಳಲ್ಲಿ ಕೆಲಸಲಕ್ಕೆ ಬರುವವರು ಆನ್‌ಲೈನ್ ಗೇಮಿಂಗ್ ವಿಚಾರವಾಗಿ ಕಳ್ಳತನದ ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಸರ್ಕಾರ ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.





